2020-23ಕ್ಕೆ ಹೋಲಿಸಿದರೆ ಕಳೆದೆರಡು ವರ್ಷಗಳಲ್ಲಿ ಭಾರತೀಯ ಸಿನಿಮಾಗಳ ಗೆಲುವಿನ ಸಂಖ್ಯೆ ಕಡಿಮೆ ಆಗಿದೆ. ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸುತ್ತಿವೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಎರಡು ಹಾಲಿವುಡ್ ಸಿನಿಮಾಗಳು ಕೆಲವೇ ದಿನಗಳಲ್ಲಿ 100 ಕೋಟಿ ಗಳಿಕೆ ದಾಟಿವೆ. ಮತ್ತೊಂದು ಹಾಲಿವುಡ್ ಸಿನಿಮಾ ಇದೇ ಹಾದಿಯಲ್ಲಿದೆ.

ಚಿತ್ರರಂಗದ ಪಾಲಿಗೆ ಕೋವಿಡ್ ಬಳಿಕ ಎರಡು ಮೂರು ವರ್ಷ ಬಂಪರ್ ಆಗಿತ್ತು. ಹಲವಾರು ಸಿನಿಮಾಗಳು, ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಆದವು. ಆದರೆ ಕಳೆದ ಎರಡು ವರ್ಷಗಳಿಂದ ಮತ್ತೆ ಚಿತ್ರರಂಗ ತುಸು ಡಲ್ ಆಗಿದೆ. ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲು ವಿಫಲವಾಗುತ್ತಿವೆ. ಎಲ್ಲೋ ಕೆಲವು ಸಿನಿಮಾಗಳಷ್ಟೆ ಗೆಲ್ಲುತ್ತಿವೆ. ಭಾರತದ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲು ಕಷ್ಟ ಅನುಭವಿಸುತ್ತಿರುವಾಗ ಎರಡು ಹಾಲಿವುಡ್ ಸಿನಿಮಾಗಳು ನಿರಾಯಾಸವಾಗಿ ಭಾರತದ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಹಣ ಗಳಿಕೆ ಮಾಡಿವೆ. ಇನ್ನೊಂದು ಸಿನಿಮಾ 100 ಕೋಟಿ ಗಳಿಸುವತ್ತ ದಾಪುಗಾಲಿಟ್ಟಿದೆ.
ಸ್ಕಾರ್ಲೆಟ್ ಜಾನ್ಸನ್ ನಟನೆಯ ಫ್ಯಾಂಟಸಿ ಸಿನಿಮಾ ‘ಜುರಾಸಿಕ್ ವರ್ಲ್ಡ್ ರೀಬರ್ತ್’ ಮತ್ತು ಬ್ರಾಡ್ ಪಿಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಎಫ್1’ ಸಿನಿಮಾಗಳು ಕೆಲವೇ ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಆಗಿದ್ದು, ಈ ಎರಡೂ ಸಿನಿಮಾಗಳು ಭಾರತದಲ್ಲಿ ನೂರು ಕೋಟಿ ಗಳಿಕೆಯನ್ನು ದಾಟಿ ಮುನ್ನುಗ್ಗುತ್ತಿವೆ. ‘ಎಫ್1’ ಸಿನಿಮಾ ಜೂನ್ 27 ರಂದು ಭಾರತದಲ್ಲಿ ಬಿಡುಗಡೆ ಆಗಿತ್ತು. ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚಿನ ಪರದೆಗಳಲ್ಲಿ ಬಿಡುಗಡೆ ಆಗಿತ್ತು ಈ ಸಿನಿಮಾ.