ಬೆಂಗಳೂರು: “ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಹದೇವಪುರ ವಿಧಾನಸಭೆ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಕಡೆ ಚುನಾವಣೆ ಆಯೋಗದಿಂದಲೇ ಮತ ಅಕ್ರಮ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಚುನಾವಣೆ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿತು. ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಅನ್ಯಾಯದ ವಿರುದ್ಧ ಹೋರಾಡಿ, ಮತದಾನದ ಹಕ್ಕು ರಕ್ಷಣೆ ಮಾಡಿಕೊಳ್ಳಲು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಾವು ಇಂದು ಪ್ರತಿಭಟನೆ ನಡೆಸಿದ್ದೆವು. ಕೋರ್ಟ್ ಆದೇಶ ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಮೂಲಕ ಬರುವುದು ಬೇಡ ಎಂದು ತೀರ್ಮಾನಿಸಿ ಪಕ್ಷದ ವತಿಯಿಂದ ಕೆಲವು ನಾಯಕರಷ್ಟೇ ಆಗಮಿಸಿದ್ದೇವೆ. ಚುನಾವಣೆಯಲ್ಲಿ ಹೇಗೆ ಅನ್ಯಾಯವಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದು ರಾಜ್ಯದ ಉದ್ದಗಲಕ್ಕೆ ನಡೆದಿರುವ ಅನ್ಯಾಯ. ನಾವು ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅಧ್ಯಯನ ಮಾಡಿದ್ದೇವೆ. ನಾವು ಐದಾರು ಪ್ರದೇಶಗಳನ್ನು ಪ್ರಸ್ತಾಪಿಸಿ, ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ” ಎಂದರು.
“ಆಯೋಗಕ್ಕೆ ನಾವು ಮಹದೇವಪುರ ಹಾಗೂ ಗಾಂಧಿನಗರದ ಮಾದರಿಗಳನ್ನು ನಾವು ಸಲ್ಲಿಕೆ ಮಾಡಿಲ್ಲ. ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ್ದು ಕೇವಲ ಉದಾಹರಣೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ರೀತಿ ಅನ್ಯಾಯವಾಗಿದ್ದು, ಎಲ್ಲಾ ಕಡೆ ಪರಿಶೀಲನೆ ಮಾಡಿ ಈ ಅಕ್ರಮವನ್ನು ಪತ್ತೆಹಚ್ಚಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ರಿಟರ್ನಿಂಗ್ ಅಧಿಕಾರಿ, ಬಿಎಲ್ಒ ಸೇರಿದಂತೆ ಯಾರೇ ಆಗಿದ್ದರೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಮಾಹಿತಿ ನೀಡಿದರು.
For More Updates Join our WhatsApp Group :