ಜರ್ಮನಿಯಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ಸಾಲಿಗ್ರಾಮ ಮೂಲದ ಸುರೇಶ್ ಅವರು ‘ರಕ್ಕಿ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್ ಅವರ ಮಗ ರಕ್ಕಿ ಅವರೇ ಈ ಚಿತ್ರದ ನಾಯಕ. ಅವರ ಹೆಸರನ್ನೇ ಸಿನಿಮಾಗೆ ಶೀರ್ಷಿಕೆಯಾಗಿ ಇಡಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಆಶೀರ್ವಾದದೊಂದಿಗೆ ಈ ಸಿನಿಮಾ ಸೆಟ್ಟೇರಿದೆ. ‘ಎಸ್.ಎನ್.ಆರ್. ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವೆಂಕಟ್ ಭಾರದ್ವಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ‘ರಕ್ಕಿ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ‘ರಕ್ಕಿ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಸಿನಿಮಾ ಯಶಸ್ವಿ ಆಗಲೆಂದು ಅವರು ಹಾರೈಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದ ಸದಸ್ಯರು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಥೆ ಕೇಳಿ ಚೆನ್ನಾಗಿದೆ ಎಂದ ಬಳಿಕವೇ ಸುರೇಶ್ ಅವರು ಈ ಸಿನಿಮಾ ಮಾಡಲು ಮುಂದಾಗಿದ್ದು.
‘ನಾನು ಐಟಿ ಉದ್ಯೋಗಿ. 20 ವರ್ಷಗಳಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ನಮ್ಮ ತಂದೆ ರಾಜಶೇಖರ್ ಅವರು ಡಾ. ರಾಜ್ಕುಮಾರ್ ನಟನೆ ಹೊಸಬೆಳಕು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ನಾನು ರಕ್ಕಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಒಪ್ಪಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇವೆ’ ಎಂದು ನಿರ್ಮಾಪಕ ಸುರೇಶ್ ಅವರು ಹೇಳಿದರು.
For More Updates Join our WhatsApp Group :




