ಕೇರಳದಲ್ಲಿ ATM ದರೋಡೆ : ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್ ಚೇಸ್

ಕೇರಳದಲ್ಲಿ ATM ದರೋಡೆ : ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್ ಚೇಸ್

ತ್ರಿಶ್ಯೂರು : ಕೇರಳದ ತ್ರಿಶ್ಯೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅಪರಿಚಿತ ದರೋಡೆ ಗುಂಪೊಂದು ಮೂರು ಕಡೆ ಎಟಿಎಂ ದರೋಡೆ ಮಾಡಿ 65 ಲಕ್ಷ ಹಣ ದೋಚಿದ್ದಾರೆ. ಈ ನಡುವೆ ತಮಿಳುನಾಡಿನಲ್ಲಿ ಕಂಟೈನರ್ನಲ್ಲಿ ಪರಾರಿಯಾಗುತ್ತಿದ್ದ ಗ್ಯಾಂಗ್ವೊಂದನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ. ಇದೇ ಗ್ಯಾಂಗ್ ಎಟಿಎಂ ದರೋಡೆ ಘಟನೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಕೇರಳದಲ್ಲಿ ಎಟಿಎಂಗೆ ಕನ್ನ: ತ್ರಿಶ್ಯೂರಿನ ಮಪ್ರನಂ, ತ್ರಿಶ್ಯೂರು ಪೂರ್ವ ಮತ್ತು ಕೊಲಝಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂ ಅನ್ನು ಗುರಿಯಾಗಿಸಿಕೊಂಡು ಈ ದರೋಡೆ ಮಾಡಲಾಗಿದೆ. ಸರಿ ರಾತ್ರಿ ಅಂದರೆ 2 ರಿಂದ ಮುಂಜಾನೆ 4 ಗಂಟೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಮೂರು ಎಟಿಎಂಗಳಿಂದ ಒಟ್ಟಾರೆ ಸುಮಾರು 65 ಲಕ್ಷ ಹಣ ಲಪಟಾಯಿಸಿದ್ದಾರೆ. ಈ ದರೋಡೆ ವೇಳೆ ಮುನ್ನೆಚ್ಚರಿಕೆ ಕ್ರಮವಹಿಸಿರುವ ದರೋಡೆಕೋರರು ಸುಳಿವು ಲಭ್ಯವಾಗದಂತೆ ಸಿಸಿಟಿವಿ ಕ್ಯಾಮೆರಾ ನಾಶ ಮಾಡಿದ್ದಾರೆ. ಇದಾದ ಬಳಿಕ ಗ್ಯಾಸ್ ಕಟ್ಟರ್ ನಿಂದ ಎಟಿಎಂ ಮೆಷಿನ್ ಅನ್ನು ಕಟ್ ಮಾಡಿ ಹಣ ಎಗರಿಸಿದ್ದಾರೆ.

ಎಟಿಎಂನಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಸೆಂಟ್ರಲ್ ಕಂಟ್ರೋಲ್ ರೂಮ್ ಈ ಕುರಿತು ಪೊಲೀಸರಿಗೆ ಸುದ್ದಿ ಮುಟ್ಟಿಸಿದೆ. ತಕ್ಷಣಕ್ಕೆ ಕಾರ್ಯಾಚರಣೆಗೆ ಇಳಿದು ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಈ ದರೋಡೆ ಮಾಡಿರುವ ಗ್ಯಾಂಗ್ ಸಂಬಂಧ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ನೆರೆಯ ತಮಿಳುನಾಡಿನಲ್ಲಿಯೂ ತನಿಖೆ ಪ್ರಾರಂಭಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಕಂಟೈನರ್ ಟ್ರಕ್ ಚೆಸ್: ಕೇರಳದಲ್ಲಿ ಎಟಿಎಂ ದರೋಡೆ ಮಾಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ದೊಡ್ಡ ಕಂಟೈನರ್ ಟ್ರಕ್ನಲ್ಲಿದ್ದ ಕಳ್ಳರ ಗ್ಯಾಂಗ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಘಟನೆ ಸಂಬಂಧ ಕೇರಳ ಪೊಲೀಸರ ಮಾಹಿತಿ ಪಡೆದಿದ್ದ ತಮಿಳುನಾಡು ಪೊಲೀಸರು, ಅನುಮಾನಾಸ್ಪದ ವಾಹನ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬಂದ ಟ್ರಕ್ ಮತ್ತು ಅದರೊಳಗಿದ್ದವರ ನಡೆ ಕಂಡು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಟ್ರಕ್ನಲ್ಲಿದ್ದವರು ನಮಕ್ಕಲ್ ಜಿಲ್ಲೆಯ ಕುಮಾರಪಾಲ್ಯಂನಲ್ಲಿ ಕಾರು ಮತ್ತು ದ್ವಿಚಕ್ರಕ್ಕೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ.

ಕಂಟೈನರ್ ಟ್ರಕ್ ಅನ್ನು ಬೆನ್ನುಹತ್ತಿದ್ದ ಪೊಲೀಸರು, ಚಾಲಕನಿಗೆ ವಾಹನ ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ, ಆತ ವಾಹನ ಸಲ್ಲಿಸಲು ನಿರಾಕರಿಸಿದ್ದು, ಮತ್ತಷ್ಟು ವೇಗದ ಚಾಲನೆಗೆ ಮುಂದಾಗಿದ್ದಾನೆ. ಕಡೆಗೆ ಪೊಲೀಸರು ಫೈರಿಂಗ್ ನಡೆಸಿದ್ದು, ಕಂಟೈನರ್ ಟ್ರಕ್ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಆರೋಪಿ ಸಾವನ್ನಪ್ಪಿದ್ದು, ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *