ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಸಂಕಷ್ಟ: ಕಿ.ಮೀ ಸಾಲು, ಸರ್ಕಾರಕ್ಕೆ ಎಚ್ಚರಿಕೆ.

ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಸಂಕಷ್ಟ: ಕಿ.ಮೀ ಸಾಲು, ಸರ್ಕಾರಕ್ಕೆ ಎಚ್ಚರಿಕೆ.

ಸೋಮವಾರದೊಳಗೆ ಪರಿಹಾರ ಬೇಡಿಕೆ; ಇಲ್ಲದಿದ್ದರೆ ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಆಟೋ ಎಲ್‌ಪಿಜಿ ಗ್ಯಾಸ್ ಅಭಾವ ವಿಕೋಪಕ್ಕೆ ತಲುಪಿದ್ದು, ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಗ್ಯಾಸ್ ಕೊರತೆ ಮತ್ತು ಅನಿಯಂತ್ರಿತ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಏತನ್ಮಧ್ಯೆ, ಸೋಮವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ಪೀಸ್ ಆಟೋ’ ಸಂಘಟನೆ ಗಡುವು ನೀಡಿದೆ. ಇಲ್ಲದಿದ್ದರೆ ಸಚಿವರ ಮನೆಗೆ ಆಟೋ ಸಮೇತ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

ಮಧ್ಯರಾತ್ರಿಯಿಂದಲೇ ಕಿಲೋಮೀಟರ್‌ಗಟ್ಟಲೆ ಕ್ಯೂ

ನಗರದ ಉತ್ತರ ಭಾಗದ ನಾಗೇನಹಳ್ಳಿ ಮತ್ತು ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾಸ್‌ಗಾಗಿ ಆಟೋಗಳ ಬೃಹತ್ ಸರದಿ ಸಾಲು ಕಂಡುಬರುತ್ತಿದೆ. ಪ್ರೊಪೆಲ್ ಆಟೋ ಗ್ಯಾಸ್ ಬಂಕ್ ಬಳಿ ಸುಮಾರು 2 ಕಿಲೋಮೀಟರ್‌ವರೆಗೂ ಆಟೋಗಳು ಸಾಲುಗಟ್ಟಿ ನಿಂತಿವೆ.

ಚಾಲಕರು ರಾತ್ರಿ 11 ಗಂಟೆಯಿಂದಲೇ ತಿಂಡಿ-ತೀರ್ಥವಿಲ್ಲದೆ ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ದಿನವಿಡೀ ಕ್ಯೂ ನಿಂತರೆ ದುಡಿಯುವುದು ಯಾವಾಗ? ಮಕ್ಕಳ ಶಾಲಾ ಫೀಸು, ಸಾಲದ ಕಂತು ಕಟ್ಟುವುದು ಹೇಗೆ? ಎಂದು ಚಾಲಕರು ಕಣ್ಣೀರಿಡುತ್ತಿದ್ದಾರೆ.

ಬಂಕ್ ವ್ಯವಸ್ಥಾಪಕರ ಪ್ರಕಾರ, ಗ್ಯಾಸ್ ಪೂರೈಕೆ ಅನಿಶ್ಚಿತವಾಗಿದ್ದು, ಸ್ಟಾಕ್ ಬಂದ ಕೂಡಲೇ ಖಾಲಿಯಾಗುತ್ತಿದೆ. ಮುಂದಿನ ಲೋಡ್ ಯಾವಾಗ ಬರುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿರುವುದು ಚಾಲಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಸೋಮವಾರದೊಳಗೆ ಸರ್ಕಾರ ಶಾಶ್ವತ ಪರಿಹಾರ ನೀಡದಿದ್ದರೆ ವಿಧಾನಸೌಧದ ಬದಲು ನೇರವಾಗಿ ಸಚಿವರ ನಿವಾಸವೇ ನಮ್ಮ ಹೋರಾಟದ ಕೇಂದ್ರವಾಗಲಿದೆ ಎಂದು ಚಾಲಕರು ಎಚ್ಚರಿಕೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *