ಮಾಲೆ ಧರಿಸಿದ ಮಕ್ಕಳನ್ನು ಶಾಲೆಯಿಂದ ಹೊರಹಾಕಿದರಾ?
ತುಮಕೂರು: ತುಮಕೂರು ಜಿಲ್ಲೆಯ ಮರಳೂರು ದಿಣ್ಣೆ ಸರ್ಕಾರಿ ಶಾಲೆಯಲ್ಲಿ ಅಯ್ಯಪ್ಪ ಮಾಲ ಧರಿಸಿ ಬಂದಿದ್ದ 6ನೇ ತರಗತಿಯ ಇಬ್ಬರು ಮಕ್ಕಳನ್ನು ಶಾಲೆಯಿಂದ ಕಳುಹಿಸಿದ ಆರೋಪವೊಂದು ಮುಖ್ಯ ಶಿಕ್ಷಕಿಯ ವಿರುದ್ಧ ಕೇಳಿಬಂದಿದೆ. ಈ ಹಿಂದೆ ಚಿಕ್ಕಮಗಳೂರಿನಲ್ಲಿ ಇದೇ ರೀತಿಯ ಘಟನೆ ನಡೆದು, ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ತುಮಕೂರಿನ ಶಿಕ್ಷಕಿಯ ವರ್ತನೆಗೂ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಶಿಕ್ಷಕಿ, ಮಕ್ಕಳನ್ನು ಹೊರಹಾಕಿಲ್ಲವೆಂದೂ, ವಿದ್ಯಾರ್ಥಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದೂ ಹೇಳಿದ್ದಾರೆ.
ಆರೋಪ ತಳ್ಳಿ ಹಾಕಿದ ಶಿಕ್ಷಕಿ
ಅಯ್ಯಪ್ಪ ಮಾಲೆ ಧರಿಸಿದ್ದ ಹಿನ್ನೆಲೆಯಲ್ಲಿ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಾಸ್ ಕಳುಹಿಸಲಾಗಿದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ ಆರೋಪಗಳನ್ನು ತಳ್ಳಿಹಾಕಿರುವ ಮುಖ್ಯ ಶಿಕ್ಷಕಿ , ನಾನು ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ಕಳುಹಿಸಿಲ್ಲ. ನಿಯಮಾನುಸಾರ ಮಾಲೆ ಧರಿಸಿ, ದೀಕ್ಷಾ ವಸ್ತ್ರದಲ್ಲೇ ಶಾಲೆಗೆ ಬರುವುದಕ್ಕೆ ಅವಕಾಶವಿಲ್ಲ ಎಂದು ಬಿಇಒ ನನಗೆ ತಿಳಿಸಿದ್ದಾರೆ. ಅದನ್ನೇ ಮಕ್ಕಳಿಗೆ ತಿಳಿವಳಿಕೆ ರೂಪದಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಶಿಕ್ಷಕಿ ವಿರುದ್ಧ ಡಿಡಿಪಿಐಗೆ ದೂರು
ಮಕ್ಕಳನ್ನು ನಾನು ಹೊರಹಾಕಿಲ್ಲವೆಂದ ಶಿಕ್ಷಕಿ, ಶಾಲೆಯಲ್ಲಿ ಮಧ್ಯಾಹ್ನ ಮೊಟ್ಟೆ ಬೇಯಿಸುವ ವ್ಯವಸ್ಥೆ ಇದೆ. ಜೊತೆಗೆ ಕೆಲವು ವಿದ್ಯಾರ್ಥಿನಿಯರು ಮುಟ್ಟಾಗಿರುವ ಸಾಧ್ಯತೆಯಿದ್ದು, ಮೈಲಿಗೆಯಾಗಬಾರದೆಂಬ ಕಾರಣಕ್ಕೇ ನಾನೇ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿದ್ದೇನೆ. ಇದನ್ನು ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಗೊಂದಲವಿದ್ದು, ಬಿಇಒ ಅವರ ಗಮನಕ್ಕೆ ತರಲಾಗುವುದು ಎಂದೂ ತಿಳಿಸಿದ್ದಾರೆ. ಆದರೆ ಮಕ್ಕಳ ಧಾರ್ಮಿಕ ಶ್ರದ್ಧೆಗೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಹಿಂದೂ ಹಿತ ರಕ್ಷಣಾ ವೇದಿಕೆ ಡಿಡಿಪಿಐ ಅವರಿಗೆ ದೂರು ಸಲ್ಲಿಸಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
For More Updates Join our WhatsApp Group :




