ಉಪೇಂದ್ರ ಮಾತ್ರವಲ್ಲದೇ ಅನೇಕರಿಗೆ ಬಿ. ಸರೋಜಾದೇವಿ ಅವರು ಸಹಾಯ ಮಾಡಿದ್ದರು. ಚಿತ್ರರಂಗಕ್ಕೆ ಅವರು ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದರು. ಆ ಕುರಿತು ಉಪೇಂದ್ರ ಮಾತನಾಡಿದ್ದಾರೆ. ‘ಸರ್ಕಾರ ಗಮನ ನೀಡಬೇಕು. ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಬೇಕು’ ಎಂದು ಉಪೇಂದ್ರ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ಖ್ಯಾತ ನಟಿ ಬಿ. ಸರೋಜಾದೇವಿ ಅವರ 13ನೇ ದಿನದ ಪುಣ್ಯತಿಥಿ ಮಾಡಲಾಗಿದೆ. ಇದರಲ್ಲಿ ಅವರ ಕುಟುಂಬದವರು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಸರೋಜಾದೇವಿ ಜೊತೆಗಿನ ಒಡನಾಟ, ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸಿಕೊಂಡಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರಿಗೆ ಬಿ. ಸರೋಜಾದೇವಿ ಅವರ ಬಗ್ಗೆ ಅಪಾರ ಗೌರವ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಹೇಳಿದ್ದಾರೆ. ‘ಎ’ ಸಿನಿಮಾದ ಬಿಡುಗಡೆ ವೇಳೆ ಸರೋಜಾದೇವಿ ಅವರು ಮಾಡಿದ್ದ ಸಹಾಯವನ್ನು ಉಪೇಂದ್ರ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
‘ಓಂ’, ‘ಶ್’ ಮುಂತಾದ ಸಿನಿಮಾಗಳ ಮೂಲಕ ನಿರ್ದೇಶಕನಾಗಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಉಪೇಂದ್ರ ಅವರು ಸಾಬೀತು ಮಾಡಿದ್ದರು. ಬಳಿಕ ಅವರು ಹೀರೋ ಆಗಲು ನಿರ್ಧರಿಸಿದರು. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಎ’ ತುಂಬಾ ಭಿನ್ನವಾಗಿ ಮೂಡಿಬಂದಿತ್ತು. ಆದರೆ ಆ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿತ್ತು. ಆದರೆ ಆ ಸಮಸ್ಯೆಯನ್ನು ಪರಿಹರಿಸಿದವರೇ ಬಿ. ಸರೋಜಾದೇವಿ.
‘ಎ ಸಿನಿಮಾವನ್ನು ಸೆನ್ಸಾರ್ ಮಾಡಲು ಸಾಧ್ಯವಿಲ್ಲ. ಅದು ಬಿಡುಗಡೆಗೆ ಯೋಗ್ಯವಲ್ಲದ ಸಿನಿಮಾ ಎಂಬ ಸಂದರ್ಭ ಬಂದಿತ್ತು. ಆಗ ನಮ್ಮ ಸಿನಿಮಾ ರಿವೈಸಿಂಗ್ ಕಮಿಟಿಗೆ ಹೋದಾಗ ಸರೋಜಾದೇವಿ ಅವರು ನನ್ನನ್ನು ಒಳಗೆ ಕರೆದ ರೀತಿಯೇ ಆಶ್ಚರ್ಯ. ಎದ್ದು ನಿಂತುಕೊಂಡು, ಚಪ್ಪಾಳೆ ತಟ್ಟಿ ನನ್ನನ್ನು ಕರೆದರು. ಮೊದಲ ಬಾರಿಗೆ ಎ ಸಿನಿಮಾವನ್ನು ಹೊಗಳಿದ ಮಹಾತಾಯಿ ಅವರು’ ಎಂದಿದ್ದಾರೆ ಉಪೇಂದ್ರ.