ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ಗೆ ಮಾರಾಟವಾದ ಬಾಳೆಹಣ್ಣು

ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ಗೆ ಮಾರಾಟವಾದ ಬಾಳೆಹಣ್ಣು

ಅಮೆರಿಕ: ಒಂದು ಬಾಳೆಹಣ್ಣಿನ ಬೆಲೆ 5 ರಿಂದ 6 ರುಪಾಯಿ, ಅಬ್ಬಬ್ಬಾ ಎಂದರೆ 10 ರುಪಾಯಿ ಇರಬಹುದು. ಆದರೆ ಇಲ್ಲಿರುವ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿರುವ ಬಾಳೆಹಣ್ಣು ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ಗೆ (52,37,36,010 ರೂ.) ಮಾರಾಟವಾಗಿದೆ. ಈ ಮೂಲಕ ಕಲೆ ಹಾಗೂ ಮೌಲ್ಯ ಮತ್ತು ಗ್ರಹಿಕೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಬುಧವಾರ ನ್ಯೂಯಾರ್ಕ್ನಲ್ಲಿ ನಡೆದ ಹರಾಜಿನಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮಿಯೊಬ್ಬರು ಈ ಬಾಳೆಹಣ್ಣನ್ನು ಇಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಬಾಳೆಹಣ್ಣು ಕೋಟಿ ಬೆಲೆ ಬಾಳುತ್ತಿದೆ. ಇದೇನು ಬೆಳ್ಳಿ, ಚಿನ್ನ ಅಥವಾ ವಜ್ರದಿಂದ ಮಾಡಿದ್ದಲ್ಲ. ನಿಜವಾದ ಬಾಳೆಹಣ್ಣೇ ಆದರೂ ಯಾಕೆ ಇಷ್ಟೊಂದು ಬೆಲೆ ಅಂತೀರಾ? ಇದು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರ ಕಲಾಕೃತಿ. ಈ ಕಲಾಕೃತಿಗೆ ಕಲಾವಿದ ಮೌರಿಜಿಯೋ “ಕಮೀಡಿಯನ್” ಎಂದು ಹೆಸರಿಟ್ಟಿದ್ದಾರೆ.

2019ರಲ್ಲಿ ಮಿಯಾಮಿ ಬೀಚ್ನಲ್ಲಿ ನಡೆದ ಆರ್ಟ್ ಬಾಸೆಲ್ನಲ್ಲಿ ಮೊದಲ ಬಾರಿಗೆ ಕಲಾವಿದ ಮೌರಿಜಿಯೊ ಕ್ಯಾಟೆಲನ್, ಈ ಬಿಳಿ ಗೋಡೆಗೆ ಹಳದಿ ಬಾಳೆಹಣ್ಣನ್ನು ಟೇಪ್ನಿಂದ ಅಂಟಿಸಿದ ಕಲಾಕೃತಿಯನ್ನು ಪ್ರದರ್ಶನಕ್ಕಿಟ್ಟಿದ್ದರು. ಆಗ ನೋಡುಗರು ತಮಾಷೆಯಾಗಿದೆ ಎಂದು ವ್ಯಾಖ್ಯಾನಿಸಿ, ಕಲಾ ಸಂಗ್ರಹಕಾರರ ಮಾನದಂಡಗಳ ಮೇಲೆ ಪ್ರಶ್ನೆ ಹಾಗೂ ಟೀಕೆಗಳ ಮಳೆಯನ್ನೇ ಹರಿಸಿದ್ದರು. ಅಷ್ಟೇ ಅಲ್ಲ ಒಂದು ಹಂತದಲ್ಲಿ ಇನ್ನೊಬ್ಬ ಕಲಾವಿದ ಗೋಡೆಯಿಂದ ಬಾಳೆಹಣ್ಣನ್ನು ತೆಗೆದು ತಿಂದಿದ್ದ ಸನ್ನಿವೇಶ ನಡೆದಿತ್ತು. ಆದರೂ ಆ ಕಲಾಕೃತಿ ತುಂಬಾ ಗಮನ ಸೆಳೆದಿತ್ತು. ಇಂದು ಚರ್ಚೆ ಹಾಗೂ ಕುತೂಹಲವನ್ನು ಹುಟ್ಟುಹಾಕುವ ಆಧುನಿಕ ಕಲೆಯ ಸಾಮರ್ಥ್ಯದ ಸಂಕೇತವಾಗಿ ಉಳಿದಿದೆ. ಆದರೆ ಗ್ಯಾಲರಿಯ ಮಾಹಿತಿ ಪ್ರಕಾರ, ಆ ಕಲಾಕೃತಿಯ ಮೂರು ಆವೃತ್ತಿಗಳು $120,000 ಮತ್ತು $150,000 ನಡುವೆ ಮಾರಾಟವಾಗಿದ್ದವು.

ಇಷ್ಟೊಂದು ಹಣ ನೀಡಿ ಖರೀದಿಸಿದ್ದೇಕೆ?: ಇದೀಗ ಮತ್ತೆ ಐದು ವರ್ಷಗಳ ನಂತರ ಅದೇ ರೀತಿಯ ಕಲಾಕೃತಿಗೆ ಕ್ರಿಪ್ಟೋಕರೆನ್ಸಿ ಫ್ಲಾಟ್ಫಾರ್ಮ್ TRON ನ ಸಂಸ್ಥಾಪಕ ಜಸ್ಟಿನ್ ಸನ್ ಸೋಥೆಬಿ ಹರಾಜಿನಲ್ಲಿ ಹಿಂದಿನ ಬೆಲೆಯ 50 ಪಟ್ಟು ಹೆಚ್ಚು ಬೆಲೆ ಪಾವತಿಸಿ ಖರೀದಿಸಿದ್ದಾರೆ. ನಿಖರವಾಗಿ ಹೇಳುವುದಾದರೆ, ಸನ್ ಅವರು ಒಂದು ಬಾಳೆಹಣ್ಣನ್ನು ಗೋಡೆಯ ಟೇಪ್ನಿಂದ ಅಂಟಿಸುವ ಮತ್ತು ಅದನ್ನು ಕಮೀಡಿಯನ್ ಎಂದು ಕರೆಯುವ ಅಧಿಕಾರವಿರುವ ದೃಢೀಕರಣದ ಪ್ರಮಾಣಪತ್ರವನ್ನು ಅಷ್ಟು ಬೆಲೆ ಕೊಟ್ಟು ಖರೀದಿಸಿದಂತಾಗಿದೆ.

ನ್ಯೂಯಾರ್ಕ್ ಸೋಥೆಬಿಸ್ನಲ್ಲಿ ನಡೆದ ಹರಾಜಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಾಳೆಹಣ್ಣನ್ನು ನೆಲದಿಂದ 160 ಸೆಂಟಿಮೀಟರ್ ಎತ್ತರದಲ್ಲಿ ಗೋಡೆಗೆ ಸಿಲ್ವರ್ ಬಣ್ಣದ ಟೇಪ್ನಿಂದ ಅಂಟಿಸಲಾಗಿದೆ. ಅದರ ಎರಡೂ ಬದಿಗಳಲ್ಲಿ ಬಿಳಿ ಕೈಗವಸುಗಳನ್ನು ಧರಿಸಿದ ಇಬ್ಬರು ಹ್ಯಾಂಡ್ಲರ್ಗಳು ನಿಂತಿದ್ದಾರೆ. ಪಕ್ಕದಲ್ಲೇ ಹರಾಜು ಕೂಗುತ್ತಿದ್ದಾರೆ. $800,000 ನಿಂದ ಪ್ರಾರಂಭವಾದ ಬಿಡ್ಡಿಂಗ್ ಕೆಲವೇ ನಿಮಿಷಗಳಲ್ಲಿ $2 ಮಿಲಿಯನ್, $3 ಮಿಲಿಯನ್, $4 ಮಿಲಿಯನ್ ದಾಟಿದೆ. ಕೊನೆಗೆ $6.2 ಮಿಲಿಯನ್ಗೆ ಜಸ್ಟಿನ್ ಸನ್ ಖರೀದಿಸಿದ್ದಾರೆ.

Leave a Reply

Your email address will not be published. Required fields are marked *