ಬೆಂಗಳೂರು : ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಗೆ ಯತ್ನಿಸಿದ ವ್ಯಕ್ತಿಯನ್ನು ಕಾಲಿಗೆ ಗುಂಡು ಹಾರಿಸಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಬ್ರಹ್ಮದೇವರ ಗುಡ್ಡದ ಬಳಿ ನಡೆದಿದೆ
ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ಪವನ ಅಲಿಯಾಸ್ ಕಡಬು ವಿರುದ್ಧ ಪೊಲೀಸರು ವಾರೆಂಟ್ ಜಾರಿಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ರಘು ಎಂಬಾತನನ್ನು ಹುಡುಕಿಕೊಂಡು ಭಾನುವಾರ ಸುಂಕದಕಟ್ಟೆಯ ಶ್ರೀನಿವಾಸ ನಗರಕ್ಕೆ ತೆರಳಿದ್ದ ಆರೋಪಿಗೆ ರಘು ಸ್ನೇಹಿತ ವಿಶ್ವಾಸ್ ಸಿಕ್ಕಿದ್ದ. ಆತನ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ಅಲ್ಲದೇ ಕೆಲ ದಿನಗಳ ಹಿಂದೆ ನಾಗಾರ್ಜುನ ಎಂಬಾತನನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದ. ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರು ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದು. ಇಂದು ಬೆಳಗ್ಗೆ ಪವನ್ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಲ್ಲಾಳ ಉಪನಗರದ ಬಳಿಯಿರುವ ಬ್ರಹ್ಮದೇವರ ಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಇರುವುದರ ಬಗ್ಗೆ ಖಚಿತ ಮಾಹಿತಿ ಪಡೆದಿ ಗೋವಿಂದರಾಜನಗರ ಠಾಣೆ ಇನ್ಸ್ಪೆಕ್ಟರ್ ಸುಬ್ರಮಣಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಆರೋಪಿ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಇನ್ಸ್ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿರುದ್ಧ ಡಕಾಯತಿ, ಗಾಂಜಾ ಮತ್ತಿನಲ್ಲಿ ಹಲ್ಲೆ ಸೇರಿದಂತೆ ಸುಮಾರು 11ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದರು. ಸದ್ಯ ಆರೋಪಿ ಪವನ್ ಹಾಗೂ ಗಾಯಾಳು ಹೆಡ್ ಕಾನ್ಸ್ಟೇಬಲ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.