ಪ್ಯಾರಿಸ್: ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ನವದೀಪ್ ಸಿಂಗ್ ಅವರಿಗೆ ಚಿನ್ನ ಪದಕ ಒಲಿದಿದೆ. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪ್ಯಾರಾಲಿಂಪಿಕ್ನಲ್ಲಿ ಪುರುಷರ ಜಾವೆಲಿನ್ ಎಫ್41 ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ.
ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್41 ಫೈನಲ್‌ನಲ್ಲಿ ಇರಾನ್‌ನ ಸದೆಗ್ ಬೀತ್ ಸಯಾಹ್ ಚಿನ್ನದ ಪದ ಜಯಿಸಿದ್ದರು. ಭಾರತದ ನವದೀಪ್ ಸಿಂಗ್ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಚಿನ್ನದ ಪದಕ ವಿಜೇತ ಇರಾನ್‌ನ ಕ್ರೀಡಾಪಟು ಸ್ಪರ್ಧೆ ವೇಳೆ ಆಗಾಗ ಆಕ್ಷೇಪಾರ್ಹ ಧ್ವಜವನ್ನು ಪ್ರದರ್ಶಿಸಿದ್ದಕ್ಕಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಬೆಳ್ಳಿ ಗೆದ್ದಿದ್ದ ನವದೀಪ್ಗೆ ಚಿನ್ನದ ಪದಕ ಒಲಿದಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಹರಿಯಾಣದ 23 ವರ್ಷದ ಪ್ಯಾರಾ ಅಥ್ಲೀಟ್ ನವದೀಪ್ ಸಿಂಗ್ ಅವರು ಈ ಬಾರಿ ಫೈನಲ್‌ನಲ್ಲಿ 47.32 ಮೀಟರ್ವರೆಗೆ ಭರ್ಚಿ ಎಸೆದು ಉತ್ತಮ ಪ್ರದರ್ಶನ ನೀಡಿದರು. ಆದರೆ ಇರಾನ್‌ನ ಸದೆಗ್ ಬೀತ್ ಸಯಾಹ್ 47.64 ಮೀಟರ್ ದೂರ ಎಸೆದು ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.
ಆದರೆ ಇರಾನ್ ಸ್ಪರ್ಧಿಯು ತಮ್ಮ ವರ್ತನೆಯಿಂದಾಗಿ ಅನರ್ಹತೆಗೊಂಡರು. ಇದರಿಂದಾಗಿ ನವದೀಪ್ ಬೆಳ್ಳಿ ಪದಕವನ್ನು ಚಿನ್ನಕ್ಕೆ ಏರಿಸಲಾಗಿದೆ. ಇನ್ನು 44.72 ಮೀಟರ್ ದೂರ ಭರ್ಚಿ ಎಸೆದ ಚೀನಾದ ಪೆಂಗ್‌ಕ್ಸಿಯಾಂಗ್ ಬೆಳ್ಳಿ, ಇರಾಕ್‌ನ ನುಖೈಲಾವಿ ವೈಲ್ಡಾನ್ (40.46 ಮೀಟರ್) ಕಂಚಿನ ಪದಕ ಪಡೆದರು.
ಹರಿಯಾಣದ ಪಾಣಿಪತ್‌ನಲ್ಲಿ ಜನಿಸಿದ ನವದೀಪ್ ಆರಂಭದಿಂದಲೂ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಅವರ ತಂದೆ ರಾಷ್ಟ್ರೀಯ ಮಟ್ಟದ ಕುಸ್ತಿಪಟು. ನವದೀಪ್ ಅವರು ಸಾಮಾಜಿಕ ನಿರೀಕ್ಷೆಗಳು ಮತ್ತು ದೈಹಿಕ ವೈಕಲ್ಯಗಳನ್ನು ಮೀರಿ ಅಥ್ಲೆಟಿಕ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ.