ಚಿಕ್ಕಮಗಳೂರು || ಅನುಮತಿ ಪಡೆಯದೆ ಮೂಡಿಗೆರೆಯಲ್ಲಿ ಕಾರ್ ರ್ಯಾಲಿ

ಚಿಕ್ಕಮಗಳೂರು: ಪ್ರಾದೇಶಿಕ ವಿಭಾಗದ ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಎತ್ತಿನಭುಜ ದಟ್ಟಾರಣ್ಯ ರಸ್ತೆಯಲ್ಲಿ ಫೋರ್ ವೀಲ್ ಡ್ರೈವ್ ಮೋಟಾರು ರಾಲಿ ನಡೆಯುತ್ತಿದೆ.

ಸುಮಾರು 80ಕ್ಕೂ ಹೆಚ್ಚು ಕಾರುಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರೇಸಿಂಗ್ ನಲ್ಲಿ ಭಾಗವಹಿಸಿವೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ, ರಹಸ್ಯವಾಗಿ ಕಾರು ರ್ಯಾಲಿ ಆಯೋಜಿಸಿದ್ದು ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳಿಗೆ ಆಘಾತವಾಗಿದೆ. ಬೆಂಗಳೂರು, ಹಾಸನ, ಸಕಲೇಶಪುರ, ತೀರ್ಥಹಳ್ಳಿ ಮತ್ತು ಶಿವಮೊಗ್ಗದಿಂದ 80 ಕಾರುಗಳು ಭಾಗವಹಿಸಿದ್ದವು. ಖಾಸಗಿ ಸಂಸ್ಥೆಗಳು ಆಫ್ ರೋಡಿಂಗ್ ಆಯೋಜಿಸಿದ್ದನ್ನು ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಾಹನಗಳು ಖಾಸಗಿ ಜಮೀನುಗಳು, ಕಾಫಿ ಎಸ್ಟೇಟ್‌ಗಳು, ಬೈರಾಪುರ ಎಸ್ಟೇಟ್ ಗ್ರಾಮ ಮತ್ತು ಎತ್ತಿನ ಭುಜದ ಬಳಿಯ ಮೂಲಕ ಸಾಗಿವೆ ಎಂದು ಪ್ರಾಥಮಿಕ ಮಾಹಿತಿ ತೋರಿಸುತ್ತದೆ ಎಂದು ಚಿಕ್ಕಮಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಎನ್ ತಿಳಿಸಿದ್ದಾರೆ. ಈ ಕಾರು ರ್ಯಾಲಿ ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿಲ್ಲ, ಆದಾಗ್ಯೂ, ಹಾನಿಗೊಳಗಾದ ಮರಗಳು, ಹುಲ್ಲುಗಾವಲುಗಳು ಮತ್ತು ಪ್ರಾಣಿಗಳಿಗೆ ತೊಂದರೆಯಾದ ಬಗ್ಗೆ ವಿವರವಾದ ವರದಿಯನ್ನು ಕೇಳಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆಫ್ ರೋಡಿಂಗ್ ಮತ್ತು ರ್ಯಾಲಿಯಲ್ಲಿ ತೊಡಗಿದ್ದ 50 ವಾಹನಗಳನ್ನು ವಶಪಡಿಸಿಕೊಂಡರು. ಅನುಮತಿಯಿಲ್ಲದೆ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ಅವರು ದೂರು ದಾಖಲಿಸಿದ್ದಾರೆ. ಈ ಕುರಿತು ಮೂಡಿಗೆರೆ ವಲಯ ಅರಣ್ಯಾಧಿಕಾರಿಯಾಗಲೀ ಅಥವಾ ತಳಮಟ್ಟದ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎದ್ದು ಕಾಣುತ್ತಿದೆ ಎಂದು ಚಿಕ್ಕಮಗಳೂರಿನ ಕಾರ್ಯಕರ್ತ ವೀರೇಶ್ ಜಿ ಆರೋಪಿಸಿದ್ದಾರೆ.ಅರಣ್ಯ ಪ್ರದೇಶದ ಈ ಭಾಗದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲು. ಪಂಚಾಯಿತಿಯಿಂದ ಅನುಮತಿ ಪಡೆಯದ ಕಾರಣ ಅರಣ್ಯ ಇಲಾಖೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ತಾಲ್ಲೂಕಿನ ಜನರು ಮೋಜಿನ ಕ್ರೀಡೆಯಲ್ಲಿ ಭಾಗಿಯಾಗುವುದರ ಮೂಲಕ ಅರಣ್ಯ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಅತೀವೇಗದ ವಾಹನಗಳ ಸದ್ದು ವನ್ಯಜೀವಿಗಳಿಗೆ ಕಂಟಕವಾಗಲಿದೆ. ಈ ಭಾಗವು ಆನೆ ಕಾರಿಡಾರ್ ಆಗಿದ್ದು, ಆನೆಗಳು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಸಾಧ್ಯತೆ ಇದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *