ಬೆಂಗಳೂರು : 100 ಜನ ಅಪರಾಧಿ ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುತ್ತಾರೆ ಆದರೆ ಮಾಹಿತಿದಾರನ ಮಾತು ನಂಬಿ ಸತ್ಯಾಸತ್ಯತೆ ಪರಿಶೀಲನೆ ನಡೆಸದೆ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಮೂವರು ಅಮಾಯಕರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಘಟನೆ ಹಿನ್ನೆಲೆ ಪಿಎಸ್ಐ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬನಶಂಕರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶ್ರೀಧರ್ ಗುಗ್ರಿ, ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಸ್.ಕೆ.ರಾಜು, ಕಾನ್‌ಸ್ಟೆಬಲ್‌ಗಳಾದ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ ಅವರನ್ನು ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ
ಮಾಹಿತಿದಾರರಾಗಿದ್ದ ರಾಜಣ್ಣ ನೀಡಿದ ಸುಳಿವಿನ ಆಧಾರದ ಮೇಲೆ ಬನಶಂಕರಿ ಪೊಲೀಸರು ಕಡೇನಹಳ್ಳಿ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆಗಸ್ಟ್ 9 ರಂದು ಇಬ್ಬರನ್ನು ಬಂಧಿಸಿದ್ದರು. ಆರೋಪಿಗಳ ದ್ವಿಚಕ್ರ ವಾಹನದಲ್ಲಿ ಬಚ್ಚಿಟ್ಟಿದ್ದ 400 ಗ್ರಾಂಗೂ ಅಧಿಕ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ವೈಯಕ್ತಿಕ ದ್ವೇಷದ ಕಾರಣ ಅವರನ್ನು ಸಿಲುಕಿಸಲು ಸಂಚು ರೂಪಿಸಿದ್ದಾನೆಂದು ಬಂಧಿತರ ಕುಟುಂಬಸ್ಥರು ರಾಜಣ್ಣ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು
ಬಳಿಕ ಆಯುಕ್ತರು ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಗಿರೀಶ್ ಅವರಿಗೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಆದೇಶಿಸಿದ್ದರು.
ತನಿಖೆ ನಡೆಸಿದ್ದ ಎಸಿಪಿ ಗಿರೀಶ್, ಪ್ರಕರಣದಲ್ಲಿ ಮಾಹಿತಿದಾರ ಸುಳ್ಳು ಮಾಹಿತಿ ನೀಡಿರುವುದು ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪ ಇರುವುದರ ಕುರಿತು ಸೆ. 12ರಂದು ಡಿಸಿಪಿಗೆ ಆಂತರಿಕ ವರದಿ ಸಲ್ಲಿಸಿದ್ದರು. ಅದರನ್ವಯ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.