2026ರ ಅಂತ್ಯದೊಳಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಪೂರ್ಣ : ವಿ.ಸೋಮಣ್ಣ

ಬೆಂಗಳೂರು – ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾಮಗಾರಿಯನ್ನು 2026ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.ವಿಧಾನಸೌಧದಲ್ಲಿಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಡೆದ ಉಪನಗರ ರೈಲ್ವೆ ಯೋಜನೆ ಮತ್ತು ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಮಾತನಾಡಿದರು.

ಉಪನಗರ ರೈಲು ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣ ಮೀಸಲಿಟ್ಟಿದ್ದು, ಕೇಂದ್ರದ ಪಾಲಿನ ಹಣ ಬಿಡುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಪ್ರಧಾನಿ ನರೇಂದ್ರಮೋದಿ ಅವರು 148 ಕಿ.ಮೀ ಉಪನಗರ ರೈಲು ಯೋಜನೆಗೆ ಅಡಿಪಾಯ ಹಾಕಿದ್ದರು. ನಾವು ಈಗ 70 ಕಿ.ಮೀ ಉಪನಗರ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ ಎಂದರು.

ಬೈಯಪ್ಪನಹಳ್ಳಿ-ಚಿಕ್ಕಬಾಣವಾರದವರೆಗೆ 26 ಕಿ.ಮೀ ಹಾಗೂ ಈಲರಿ-ರಾಜಾನುಕುಂಟೆ ನಡುವೆ 48 ಕಿ.ಮೀ ಉದ್ದದ ಉಪನಗರ ರೈಲ್ವೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ರೈಲ್ವೆ , ಮೆಟ್ರೋ, ಬಿಡಿಎ, ಕಂದಾಯ ಹಾಗೂ ಬಿಬಿಎಂಪಿ ನಡುವೆ ಸಮನ್ವಯದಿಂದ ಉಪನಗರ ರೈಲ್ವೆ ಮಾರ್ಗ ನಿರ್ಮಾಣದ ಕೆಲಸ ಸಾಗಲಿದೆ ಎಂದು ಸಚಿವರು ತಿಳಿಸಿದರು.

ಇನ್ನೆರಡು ವರ್ಷದಲ್ಲಿ ರೈಲ್ವೆ ಮಾರ್ಗಗಳ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ತುಮಕೂರು-ಚಿತ್ರದುರ್ಗ ರೈಲ್ವೆ ಮಾರ್ಗವನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಚಿತ್ರದುರ್ಗ-ಕೊಪ್ಪಳ ಆಲಮಟ್ಟಿ ಮಾರ್ಗದ ಬಗ್ಗೆಯೂ ಚಿಂತನೆ ಇದೆ. ಚಾಮರಾಜನಗರಕ್ಕೂ ಹೊಸ ಯೋಜನೆ ತರುತ್ತಿದ್ದೇವೆ. ವಿಜಯಪುರ ಹಾಗೂ ಮಂಗಳೂರು ಬಂದರಿನ ಡಬ್ಲಿಂಗ್ ಲೈನ್ ಒಂದು ಹಂತಕ್ಕೆ ತರುತ್ತಿದ್ದೇವೆ ಎಂದು ಹೇಳಿದರು.

50 ವರ್ಷಗಳಲ್ಲಿ ಆಗದ ಸಾಧನೆಯನ್ನು ಪ್ರಧಾನಿಯವರು ಮಾಡಿದ್ದಾರೆ. ಧಾರವಾಡ-ಚಿತ್ತೂರು ರೈಲ್ವೆ ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಇದೆ. ಕೋಚ್ಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನು ಮುಂದೆ ಭೂಸ್ವಾಧೀನ ಪ್ರಕ್ರಿಯೆಯು ರಾಜ್ಯ ಸರ್ಕಾರವೇ ಮಾಡಬೇಕಾಗುತ್ತದೆ ಎಂದು ಹೇಳಿದರು.

ತುಮಕೂರು-ರಾಯದುರ್ಗ ನಡುವಿನ 90 ಎಕರೆ ಭೂಸ್ವಾಧೀನ ಆಗಬೇಕಿದೆ. ನಮ ಕಾಲದಲ್ಲಿ ಪ್ರಾರಂಭವಾದ ಕೆಲಸಗಳನ್ನು ನಮ ಕಾಲದಲ್ಲೇ ಮುಗಿಸುತ್ತೇವೆ ಎಂದರು. ತ್ವರಿತವಾಗಿ ಪೂರ್ಣಗೊಳಿಸಿ: ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸೋಮಣ್ಣ ಅವರು ಕಾಳಜಿ ವಹಿಸಿ ಉಪನಗರ ರೈಲು ಯೋಜನೆ ಸೇರಿದಂತೆ ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

ಮೆಟ್ರೋ, ಉಪನಗರ ರೈಲು ಒಂದಕ್ಕೊಂದು ಪೂರಕವಾಗಿರಬೇಕು. ಬೆಂಗಳೂರು-ತುಮಕೂರು ನಡುವೆ ಚತುಷ್ಪದವಾಗುತ್ತಿದೆ. ಚಿತ್ರದುರ್ಗ-ಹೊಸಪೇಟೆ ಆಲಮಟ್ಟಿ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದು, ಅದಕ್ಕೂ ಸ್ಪಂದನೆ ಕೊಟ್ಟಿದ್ದಾರೆ. ವಿಜಯಪುರ-ಬೆಂಗಳೂರು ಪ್ರಯಾಣದ ಸಮಯ ಕಡಿಮೆ ಮಾಡಲು ಮನವಿ ಮಾಡಿದ್ದೇವೆ. ವಂದೇ ಭಾರತ್ ರೈಲನ್ನು ಹೆಚ್ಚಿಸಲು ಕೇಳಿದ್ದೇವೆ ಎಂದ ಅವರು, ತುಮಕೂರು-ರಾಯದುರ್ಗ ಮಾರ್ಗದ ವೇಗಕ್ಕೆ ಒತ್ತು ನೀಡಲಾಗುವುದು. ಮಂಗಳೂರು-ಕಾರವಾರದ ಮಾರ್ಗಕ್ಕೆ ಹುಬ್ಬಳ್ಳಿ- ಅಂಕೋಲದ ಮಾರ್ಗವನ್ನು ಸಂಪರ್ಕಿಸಬೇಕಿದೆ. ಈ ಎಲ್ಲ ಬೇಡಿಕೆಗಳಿಗೂ ಸಚಿವರು ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *