ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ತಡೆಗೆ BBMP ಮಹತ್ವದ ಕ್ರಮ

ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವಂತ ಅನಧಿಕೃತ ಫ್ಲೆಕ್ಸ್ ಅಳವಡಿಕೆ ಹಾವಳಿಯನ್ನು ತಪ್ಪಿಸಲು ಬಿಬಿಎಂಪಿ ಮಹತ್ವದ ಕ್ರಮ ವಹಿಸಿದೆ. ಇದರ ಸಲುವಾಗಿ ರಾತ್ರಿಯ ವೇಳೆಯಲ್ಲಿ ಪ್ರಹರಿ ವಾಹನದಿಂದ ಗಸ್ತು ತಿರುಗುವಂತ ಕ್ರಮವಹಿಸಲಾಗಿದೆ. ರಾತ್ರಿ ವೇಳೆಯಲ್ಲಿ ಗಸ್ತು ತಿರುಗಲಿರುವಂತ ಬಿಬಿಎಂಪಿಯ ಪ್ರಹರಿ ವಾಹನವು, ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಕೇಸ್ ಹಾಕಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಅಳವಡಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಎಲ್ಲಿಯೂ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್/ಬ್ಯಾನರ್ ಗಳನ್ನು ಪಾಲಿಕೆಯಿಂದ ತೆರವುಗೊಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್.ಐ.ಆರ್ ದಾಖಲಿಸಲಾಗುತ್ತಿದೆ. ಆದರೂ ಸಾರ್ವಜನಿಕ ಸ್ಥಳ, ರಸ್ತೆ ಬದಿ ಫ್ಲೆಕ್ಸ್ ಅಳವಡಿಸುವುದು ಮಾತ್ರ ನಿಯಂತ್ರಣವಾಗುತ್ತಿಲ್ಲ. ಆದ್ದರಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಜಾಹೀರಾತು ಅಳವಡಿಕೆಗೆ ನಿಯಂತ್ರಣ ತರಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ವಲಯವಾರು ಬರುವ ಫ್ರಿಂಟಿಂಗ್ ಯುನಿಟ್ಸ್ ಗಳ ಮೇಲೆ ಆಗಿಂದಾಗ್ಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸದಂತೆ ಎಚ್ಚರಿಕೆ ನೀಡಬೇಕು. ಜೊತೆಗೆ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿದಂತೆ ನಾಗರೀಕರಲ್ಲಿ ಹೆಚ್ಚು-ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ರಾತ್ರಿ ವೇಳೆ ಪ್ರಹರಿ ವಾಹನಗಳ ಮೂಲಕ ಗಸ್ತು ತಿರುಗಬೇಕು:

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ರಾತ್ರಿ ವೇಳೆ ಹೆಚ್ಚಾಗಿ ಅಳವಡಿಸುತ್ತಾರೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಒಂದು ಪ್ರಹರಿ ವಾಹನವನ್ನು ನಿಯೋಜಿಸಿ ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗುವ ಮೂಲಕ ಪರಿಶೀಲನೆ ಹಾಗೂ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಅಳವಡಿಸುವುದರ ಮೇಲೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಿ:

ನಗರದಲ್ಲಿ ಕಾಲಮಿತಿಯೊಳಗಾಗಿ ಹಾಗೂ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ “ರಸ್ತೆ ಗುಂಡಿ ಗಮನ” ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಿದ್ದು, ಅದರ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ತಂತ್ರಾಂಶದ ಮೂಲಕ ನಾಗರೀಕರಿಂದ ಬರುವ ದೂರಗಳನ್ನು ತ್ವರಿತವಾಗಿ ಮುಚ್ಚಬೇಕು. ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Leave a Reply

Your email address will not be published. Required fields are marked *