ಮುಂಬೈ: ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ವಂಚಕನೊಬ್ಬ 29 ವರ್ಷದ ಮಹಿಳೆಗೆ 18 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಈ ಸಂಬಂಧ ಅಂಧೇರಿ ಪಶ್ಚಿಮದ ವರ್ಸೋವಾ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೂಲತ: ರತ್ನಗಿರಿ ಜಿಲ್ಲೆಯ ಮಹಿಳೆ ಇಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2023 ರ ಜನವರಿಯಲ್ಲಿ ಫೇಸ್ಬುಕ್ನಲ್ಲಿ ತನ್ನನ್ನು `ವಿವೇಕ್ ಪಾಟೀಲ್’ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದುದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಆಕೆಯೊಂದಿಗೆ ಹೇಳಿಕೊಂಡಿದ್ದ ವಂಚಕ, ನಿಯಮಿತವಾಗಿ ಚಾಟ್ ಮಾಡಲು ಪ್ರಾರಂಭಿಸಿದ ನಂತರ, ಅನಾರೋಗ್ಯದ ನೆಪ ಹೇಳಿ ಸಾಲವಾಗಿ ನೀಡುವಂತೆ ಕೇಳಿದ್ದಾನೆ. ಆತ ನೀಡಿದ UPI ವಿಳಾಸಕ್ಕೆ ಹಣ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಬಳಿಕ ಹಲವು ಬಾರಿ ಹಣ ಕೇಳಿದ್ದು, ವಿವಿಧ ಖಾತೆಗಳಿಗೆ ಒಟ್ಟು 18,30,101 ರೂ. ಹಣವನ್ನು ಸಂತ್ರಸ್ತೆ ಕಳುಹಿಸಿದ್ದಾರೆ. ಆದರೆ ವಂಚಕ ಸ್ವಲ್ಪ ದಿನಗಳ ಬಳಿಕ ಮಹಿಳೆಯ ಕರೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಾಗ ಮೋಸ ಹೋಗಿರುವುದು ಆಕೆಗೆ ಮನವರಿಕೆಯಾಗಿದೆ.