ನಿತಿನ್ ನಬಿನ್ ಮಾಹಿತಿ ಪಡೆದು ರೆಡ್ಡಿಗೆ ಬೆಂಬಲ ಸೂಚನೆ.
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಮಾಹಿತಿ ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರಿಗೆ ತಲುಪಿದ್ದು, ಅವರು ಈ ಪ್ರಕರಣದ ಕುರಿತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ನಿತಿನ್ ನಬಿನ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಇದು ಗಂಭೀರ ವಿಚಾರವಾಗಿದ್ದು ಹೈಕಮಾಂಡ್ ನಿಮ್ಮ ಜತೆಗಿರಲಿದೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜರ್ನಾದನ ರೆಡ್ಡಿ ಜತೆ ನಿತಿನ್ ನಬಿನ್ ಹೇಳಿದ್ದೇನು?
ಜರ್ನಾದನ ರೆಡ್ಡಿ ಮಾತನಾಡಿದ ನಿತಿನ್ ನಬಿನ್, ಪ್ರಕರಣ ಅತ್ಯಂತ ಗಂಭೀರವಾಗಿದೆ. ಯಾವುದೇ ರೀತಿಯ ಹೋರಾಟ ನಡೆಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವದ ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಪಾದಯಾತ್ರೆ ಸೇರಿದಂತೆ ಹೋರಾಟದ ರೂಪುರೇಷೆಗಳ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವಂತೆ ಜನಾರ್ದನ ರೆಡ್ಡಿಗೆ ನಿತಿನ್ ನಬಿನ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಚರ್ಚೆ
ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಾದಯಾತ್ರೆಯ ರೂಪುರೇಷೆಗಳ ಕುರಿತು ಶ್ರೀರಾಮುಲು ಮತ್ತು ವಿಜಯೇಂದ್ರ ನಡುವೆ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ನಡೆದಿದ್ದು, ಇದೀಗ ವಾಲ್ಮೀಕಿ ಪುತ್ಥಳಿ ಸಂಬಂಧ ಗಲಾಟೆ ನಡೆದಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು, ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯದ ಪರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
For More Updates Join our WhatsApp Group :




