ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಜನವರಿ 06 ರಂದು ಸ್ವದೇಶಿ ನಿರ್ಮಿತ ಡ್ರೈವರ್ಲೆಸ್ ರೈಲು ಸೆಟ್ ಸರಬರಾಜಿಗೆ ಚಾಲನೆ ನೀಡಲಾಗಿದೆ. ಈ ರೈಲು ಜನವರಿ 20ರ ಆಸುಪಾಸಿಗೆ ಬೆಂಗಳೂರಿನ ಮೆಟ್ರೋ ಡಿಪೋಗೆ ಆಗಮಿಸಲಿದೆ. ಹಾಗಾದರೆ ಬಹುನಿರೀಕ್ಷೆಯ ಮೆಟ್ರೋ ಹೊಸ ಮಾರ್ಗ (Metro Yellow Line) ಯಾವಾಗ ತೆರಯಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ.
ಸದ್ಯ ಹಳದಿ ಲೈನ್ನಲ್ಲಿ ಸಂಚಾರಕ್ಕೆ 02ರೈಲುಗಳು ಸಿದ್ಧವಾಗಿದೆ. ಶೀಘ್ರವೇ ಬೆಂಗಳೂರಿಗೆ ಮತ್ತೆ ಎರಡು ರೈಲುಗಳು ಆಗಮಿಸಲಿವೆ. ಇವುಗಳ ಸಹಾಯದಿಂದ ತಡವಾಗಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ಮುಂದಿನ ಏಪ್ರೀಲ್ ತಿಂಗಳಲ್ಲಿ ಆರಂಭಿಸಲು ಚಿಂತನೆ ನಡೆದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 06 ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಟಿಟಾಗರ್ನಲ್ಲಿ ಕರ್ನಾಟಕ ಸಂಸದ ತೇಜಸ್ವಿ ಸೂರ್ಯ, ಬಿಎಂಆರ್ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಡ್ರೈವರ್ಲೆಸ್ಟ್ ಮೆಟ್ರೋ ಕೋಚ್ಗಳನ್ನು ಬೆಂಗಳೂರಿಗೆ ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಜನವರಿ ಅಂತ್ಯಕ್ಕೆ ಮೆಟ್ರೋಗಳು ರೈಲು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸಿಗ್ನಲಿಂಗ್ ಟೆಸ್ಟಿಂಗ್, ಹಳಿಗೆ ಜೋಡಣೆ, ಸಂಚಾರ ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತದೆ. ಒಟ್ಟು 04 ಮೆಟ್ರೋ ರೈಲುಗಳನ್ನು ಬಳಸಿ ನಮ್ಮ ಮೆಟ್ರೊ ಹಳದಿ ಮಾರ್ಗ ತೆರಯಲು ಸಕಲ ಸಿದ್ಧತೆಗಳು ಆರಂಭವಾಗಿವೆ.
ಕಾರ್ಯಾಚರಣೆಗೆ ಹತ್ತಾರು ರೈಲುಗಳು ಅಗತ್ಯವಿರುತ್ತದೆ. ಆದರೆ ಮತ್ತಷ್ಟು ವಿಳಂಬವಾಗಬಾರದು ಎಂಬ ಕಾರಣಕ್ಕೆ ಏಪ್ರೀಲ್ನಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿ, ಕನಿಷ್ಠ ರೈಲುಗಳು ಇರುವ ಕಾರಣ ಪ್ರತಿ 30ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಜಯನಗರದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.5.ಕಿಲೋ ಮೀಟರ್ ದೂರ ಕ್ರಮಿಸಲಿದೆ. ಇಲ್ಲಿ 16 ಮೆಟ್ರೋ ನಿಲ್ದಾಣಗಳು ಬರಲಿವೆ. ಇಲ್ಲಿ ಮೆಟ್ರೋ ಸಂಚಾರ ಆರಂಭವಾದರೆ, ಐಟಿ ಉದ್ಯೋಗಿಗಳು, ಸಾರ್ವಜನಿಕರು ಸೇರಿದಂತೆ ಪ್ರತಿನಿತ್ಯ ಒಟ್ಟು 2.5 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್ಸಿಎಲ್ ಅಂದಾಜಿಸಿದೆ.
ಆರು ಬೋಗಿಗಳು ಹೊಂದಿರುವ ಒಂದು ರೈಲು ಸೆಟ್ ನಂತರ ನಾಲ್ಕು ಸೆಟ್ಗಳು ಏಪ್ರಿಲ್ ವೇಳೆಗೆ ಬೆಂಗಳೂರಿನಲ್ಲಿರಲಿವೆ. ಸಂವಹನ ಆಧಾರದಲ್ಲಿ ರೈಲು ನಿಯಂತ್ರಿಸಬಹುಯದಾಗಿದೆ. ಡ್ರೈವರ್ಲೆಸ್ಟ್ ಆಗಿದ್ದರಿಂದ ಸಿಗ್ನಲಿಂಗ್ ಮೇಲೆ ಸಂಚರಿಸಲಿವೆ. ಆದರೆ ಆರಂಭಿಕ ಹಂತದಲ್ಲಿ ಬಿಎಂಆರ್ಸಿಎಲ್ ಚಾಲಕರನ್ನು ಇಟ್ಟುಕೊಂಡು ರೈಲು ಸೇವೆ ಒದಗಿಸಲಿದೆ.
ಸೆಪ್ಟಂಬರ್ ನಿಂದ 2 ರೈಲು ಪೂರೈಕೆ
ಟಿಟಾಗರ್ ಕಂಪನಿಯು ಏಪ್ರಿಲ್ನಿಂದ ಮಾಸಿಕವಾಗಿ ಒಂದು ರೈಲು ಪೂರೈಕೆ ಮಾಡಲು ಸಿದ್ಧವಾಗಿದೆ. ನಂತರ ಸೆಪ್ಟಂಬರ್ನಿಂದ ಒಪ್ಪಂದಂತೆ ಪ್ರತಿ ತಿಂಗಳು ಎರಡು ಸೆಟ್ ರೈಲು ಒದಗಿಸುವುದಾಗಿ ಸಂಸದ ತೇಜಸ್ವಿ ಸೂರ್ಯ ಹಾಗೂ ಮೆಟ್ರೋ ನಿಗಮಕ್ಕೆ ಭರವಸೆ ನೀಡಿದೆ. ಅಲ್ಲಿಯವರೆಗೆ ಕಡಿಮೆ ರೈಲುಗಳಿಂದ ಹಳಿದ ಮಾರ್ಗ ತೆರೆಯುವ ಸಾಧ್ಯತೆ ಇದೆ. ಈ ಬಗ್ಗೆ ಬಿಎಂಆರ್ಸಿಎಲ್ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ನೀಡಲಿದೆ. ಹಳದಿ ಮಾರ್ಗದಲ್ಲಿ 15 ರೈಲುಗಳು ಬೆಂಗಳೂರು ಮೆಟ್ರೋ ನಿಗಮ 2019 ರಲ್ಲಿ ಚೀನಾದ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಕೋ ಲಿಮಿಟೆಡ್ಗೆ ಜತೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 1,578 ಕೋಟಿ ರೂಪಾಯಿ ಒಪ್ಪಂದ ಇದಾಗಿದ್ದು, 36 ರೈಲು ಪೂರೈಕೆ ಒಪ್ಪಿದ್ದು, 34 ರೈಲು ತಯಾರಿಕೆಯಲ್ಲಿ ತೊಡಗಿದೆ. ಇಲ್ಲಿಂದ ಬರುವ ರೈಲುಗಳಲ್ಲಿ 15 ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸಲು ನಿಯೋಜಿಸಲಾಗುವುದು. ಉಳಿದವುಗಳು ನೇರಳೆ ಹಾಗೂ ಹಸಿರು ಮೆಟ್ರೋ ಮಾರ್ಗಗಳಲ್ಲಿ ಬಳಕೆ ಮಾಡಲು ನಿಗಮ ನಿರ್ಧರಿಸಿದೆ.