ಬೆಂಗಳೂರು : ನಗರದಲ್ಲಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಡರಾತ್ರಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ಪ್ರಮುಖ ಜಂಕ್ಷನ್‌ಗಳ ಚೆಕ್ ಪೋಸ್ಟ್‌ಗಳ ಬಳಿ ಭೇಟಿ ನೀಡಿದ್ದಾರೆ. ಮೆಜೆಸ್ಟಿಕ್ ಶಾಂತಲಾ ಜಂಕ್ಷನ್, ಚಾಮರಾಜಪೇಟೆ ಸಿಸಿಬಿ ಕಚೇರಿ ಜಂಕ್ಷನ್, ರಾಜಾಜಿನಗರ ಮತ್ತು ಯಶವಂತಪುರ ಹೆಚ್ ಎಮ್ ಟಿ ರೋಡ್ ಸೇರಿದಂತೆ ನಗರದ ಕೆಲವೊಂದು ಮುಖ್ಯ ಜಂಕ್ಷನ್‌ಗಳಲ್ಲಿ ಪರಿಶೀಲನೆ ನಡೆಸಿದರು
ಬೆಂಗಳೂರಿನ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ನಗರದ ನಾಕಾಬಂಧಿ ಕಾರ್ಯದ ಕುರಿತು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ಮಾಹಿತಿ ನೀಡಿದ್ರು. ತಡರಾತ್ರಿ ಆಯುಕ್ತರು ಏಕಾಏಕಿ ನಾಕಾಬಂಧಿ ಹಾಕಿರುವ ಜಂಕ್ಷನ್‌ಗಳಲ್ಲಿ ವಿಸಿಟ್ ಮಾಡಿ ಪರಿಶೀಲನೆ ಮಾಡಿದ್ರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳಿಂದ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ಪಡೆದರು
ನೈಟ್ ವೇಳೆ ಭದ್ರತೆಗೆ ನಿಯೋಜಿತವಾಗಿರುವ ಸಿಬ್ಬಂದಿಗಳಿಗೆ ಮಳೆ ಮತ್ತು ಚಳಿ ಹಿನ್ನಲೆ ಜಾಕೆಟ್ ಮತ್ತು ಛತ್ರಿ ಒದಗಿಸುವಂತೆ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ರು. ಕಳೆದ ಒಂದು ವಾರದ ಹಿಂದೆ ಹೊಯ್ಸಳ ವಾಹನಗಳ ಸಿಬ್ಬಂದಿಗಳನ್ನ ಚೆಕ್ ಪೋಸ್ಟ್ ಭದ್ರತೆಗೆ ಕಡ್ಡಾಯವಾಗಿ ನಿಯೋಜಿಸುವಂತೆ ಪೊಲೀಸ್ ಕಮಿಷನರ್ ಆದೇಶಿಸಿದ್ದರು. ಕೇವಲ ಬೀಟ್ ಅಲ್ಲದೆ, ಚೆಕ್ ಪೋಸ್ಟ್‌ಗಳ ಬಳಿ ಹೊಯ್ಸಳ ವಾಹನ ಸಿಬ್ಬಂದಿಯ ತಪಾಸಣೆ ಮಾಡ್ಬೇಕು ಎಂದು ಆದೇಶಿಸಿದರು.
ಚೆಕ್ ಪೋಸ್ಟ್ ಭದ್ರತೆಗೆ ಹೊಯ್ಸಳ ವಾಹನ ಸಿಬ್ಬಂದಿ
112 ಗೆ ಕರೆ ಬಂದು ಕಂಟ್ರೋಲ್ ರೂಮ್‌ನಿಂದ ಸೂಚನೆ ದೊರೆತರೆ ಸ್ಥಳಕ್ಕೆ ಭೇಟಿ ನೀಡಿ ಪುನಃ ಚೆಕ್ ಪೋಸ್ಟ್ ಪಾಯಿಂಟ್‌ಗೆ ವಾಪಸ್ ಆಗಬೇಕು ಎಂದು ಸೂಚಿಸಿದರು. ರಸ್ತೆಗಳಲ್ಲಿ ಬೀಟ್ ಮಾಡುವ ಜೊತೆಗೆ ಚೆಕ್ ಪೋಸ್ಟ್‌ಗಳ ಭದ್ರತೆಗೆ ನಿಯೋಜಿತ ಹೊಯ್ಸಳ ವಾಹನದ ಕಾರ್ಯವಿಧಾನದ ಪರಿಣಾಮಗಳನ್ನು ಸೀಮಾಂತ್ ಕುಮಾರ್ ಸಿಂಗ್ ಖುದ್ದು ಪರಿಶೀಲನೆ ಮಾಡಿದರು.
ಹೆಲ್ಮೆಟ್ ಧರಿಸದೆ ಓಡಾಡುವವರಿಗೆ ಅರಿವು
ರಾತ್ರಿ ವೇಳೆ ಅನುಮಾನಾಸ್ಪದ ವಾಹನಗಳ ತಪಾಸಣೆ, ಪುಂಡರ ಓಡಾಟ, ಹೆಲ್ಮೆಟ್ ಧರಿಸದೆ ಓಡಾಡುವವರಿಗೆ ಅರಿವು ಮೂಡಿಸಿ ಕಡ್ಡಾಯ ವಾಹನಗಳ ತಪಾಸಣೆ ಮೂಲಕ ಅಪರಾಧ ಪ್ರಕರಣಗಳನ್ನು ತಡೆಯಲು ಕಮಿಷನರ್ ಕೆಲ ಕ್ರಮ ತೆಗೆದುಕೊಂಡಿದ್ದಾರೆ.