ಮಂಕಿ ಪಾಕ್ಸ್ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲು

ಬೆಂಗಳೂರು: ಹೊರದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಕರಣಗಳು ವರದಿಯಾದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸಜ್ಜಾಗಿದೆ.

ಅಧಿಕಾರಿಗಳ ಸೂಚನೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯ ಹೆಚ್ ಬ್ಲಾಕ್ನಲ್ಲಿ ತುರ್ತು ನಿಗಾ ಘಟಕದ ಐದು ಹಾಸಿಗೆ ಸೇರಿ 50 ಹಾಸಿಗೆಗಳನ್ನು ಮೀಸಲಿಡಲಾಗಿದೆ. ರೋಗಿಗಳ ಅರೈಕೆ ಮತ್ತು ಚಿಕಿತ್ಸೆಗೆ ಅಗತ್ಯ ಔಷಧಗಳ ದಾಸ್ತಾನು ಸಹ ಮಾಡಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಅಧೀಕ್ಷಕ ಡಾ. ದೀಪಕ್ ತಿಳಿಸಿದ್ದಾರೆ.

ಮಂಕಿ ಪಾಕ್ಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳಿಗೆ ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ. ಇನ್ನು ಮಂಕಿ ಪಾಕ್ಸ್ ವೈರಸ್ ಗುಣಲಕ್ಷಣಗಳು ಕಂಡು ಬಂದರೆ ಎಚ್ಚರಿಕೆ ವಹಿಸುವುದರ ಜೊತೆಗೆ ಅಂತಹವರಿಗೆ ತುರ್ತು ಚಿಕಿತ್ಸೆ ಜಿಲ್ಲಾ ಆಸ್ಪತ್ರೆಗಳು ಹಾಘೂ ಹಾಸಿಗೆ ಮೀಸಲು ಸೇರಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ. ಮಂಕಿ ಪಾಕ್ಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂಬಂಧ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡುವಂತೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸದ್ಯ ರಾಜ್ಯ ಹಾಗೂ ದೇಶದಲ್ಲಿ ಇಲ್ಲಿಯವರೆಗೆ ಮಂಕಿಪಾಕ್ಸ್ ಪ್ರಕರಣ ಕಂಡು ಬಂದಿಲ್ಲ. ಮೆಡಿಕಲ್ ಎಮರ್ಜನ್ಸಿ ಘೋಷಿಸುವ ಪರಿಸ್ಥಿತಿ ಇಲ್ಲ. ಆದರೆ ಹೊರದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *