ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ ‘ಹಳದಿ ನಮ್ಮ ಮೆಟ್ರೋ’ ಮಾರ್ಗದಲ್ಲಿ ರೈಲು ಸಂಚಾರ ಯಾವಾಗ? ಎಂಬುದು ಇನ್ನೂ ಖಚಿತವಾಗಿಲ್ಲ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಮೆಟ್ರೋ ರೈಲು ಬೆಂಗಳೂರು ನಗರಕ್ಕೆ ಶುಕ್ರವಾರ ಆಗಮಿಸಲಿದೆ. ರಾತ್ರಿ ಹೊತ್ತಿನಲ್ಲಿ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.
ನಮ್ಮ ಮೆಟ್ರೋ ‘ಹಳದಿ’ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ಇದಕ್ಕೆ ಹೆಚ್ಚಿನ ಮಹತ್ವವಿದೆ. ಬಿಎಂಆರ್ಸಿಎಲ್ ಅಂದಾಜಿನ ಪ್ರಕಾರ ಮಾರ್ಗದಲ್ಲಿ ಪ್ರತಿದಿನ ಸುಮಾರು 3 ಲಕ್ಷ ಜನರು ಸಂಚಾರ ನಡೆಸಲಿದ್ದಾರೆ. ಈ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆ ಕಾರಣ ರೈಲು ಸಂಚಾರ ಆರಂಭವಾಗಿಲ್ಲ.
ಪಶ್ಚಿಮ ಬಂಗಾಳದ ಟಿಟಾಗರ್ ರೈಲು ಸಿಸ್ಟಮ್ಸ್ನಲ್ಲಿ ಹಳದಿ ಮಾರ್ಗದ ಮೆಟ್ರೋ ರೈಲು ಬೋಗಿ ತಯಾರಾಗುತ್ತಿದೆ. ಜನವರಿ 6ರಂದು ಫ್ಯಾಕ್ಟರಿಯಿಂದ ರೈಲು ಬೋಗಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬುಧವಾರ ಅವುಗಳು ಕೋಲಾರಕ್ಕೆ ಆಗಮಿಸಿದ್ದು, ಶುಕ್ರವಾರ ಹೆಬ್ಬಗೋಡಿ ಡಿಪೋಗೆ ತಲುಪಲಿವೆ.
ರಾತ್ರಿ ಪ್ರಾಯೋಗಿಕ ಸಂಚಾರ: ಹೆಬ್ಬಗೋಡಿ ಡಿಪೋದಿಂದ ಹಳದಿ ಮಾರ್ಗದಲ್ಲಿ ಈ ರೈಲುಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತದೆ. ಹಗಲು ಹೊತ್ತಿನಲ್ಲಿ ಅಧಿಕ ರೈಲುಗಳ ಸಂಚಾರ ದಟ್ಟಣೆ ಇರುವ ಕಾರಣ ಮೊದಲು ರಾತ್ರಿ ಮಾತ್ರ ಪ್ರಾಯೋಗಿಕ ಸಂಚಾರ ನಡೆಸಿ, ರೈಲು ಬೋಗಿ ಪರೀಕ್ಷೆ ನಡೆಸಲಾಗುತ್ತದೆ.
ಈಗಾಗಲೇ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಚೀನಾದಿಂದ ಬಂದಿರುವ ಎರಡು ಬೋಗಿಯಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ. ಈಗ ಇನ್ನೂ ಎರಡು ರೈಲುಗಳು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿವೆ. ಮಾರ್ಚ್ ಅಂತ್ಯ ಅಥವ ಏಪ್ರಿಲ್ ಮೊದಲ ವಾರದಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವುದು ಬಾಕಿ ಇದೆ. ಈಗ ಅನುಮತಿ ಸಿಕ್ಕರೂ ಸಹ ರೈಲುಗಳ ಕೊರತೆ ಕಾರಣ ವಾಣಿಜ್ಯ ಸಂಚಾರ ಇನ್ನೂ ವಿಳಂಬವಾಗಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಇನ್ನೂ 4 ರೈಲುಗಳು ಬರುವ ನಿರೀಕ್ಷೆ ಇದೆ. ಬಳಿಕ ರೈಲು ಸಂಚಾರ ಆರಂಭದ ಕುರಿತು ಬಿಎಂಆರ್ಸಿಎಲ್ ತೀರ್ಮಾನ ಕೈಗೊಳ್ಳಲಿದೆ. ಬಿಎಂಆರ್ಸಿಎಲ್ 2019ರಲ್ಲಿ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲು ರೈಲುಗಳ ತಯಾರಿಕೆಗೆ ಚೀನಾದ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಚೀನಾದ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಟೆಂಡರ್ನಲ್ಲಿ ತಿಳಿಸಿದ್ದ ಸಮಯಕ್ಕೆ ಬೋಗಿಗಳ ಪೂರೈಕೆ ಮಾಡಿಲ್ಲ. ಕಂಪನಿ ಟೆಂಡರ್ ನಿಯಮದಂತೆ ಭಾರತದಲ್ಲಿ ಬೋಗಿ ತಯಾರಿಕಾ ಕಂಪನಿಯನ್ನು ಹುಡುಕಿ ಅವರ ಮೂಲಕ ರೈಲು ಬೋಗಿ ತಯಾರಿನನ್ನು ಮಾಡುತ್ತಿದೆ. ಈ ಕಂಪನಿ ಒಟ್ಟು 216 ಬೋಗಿಯನ್ನು ಪೂರೈಕೆ ಮಾಡಬೇಕಿದ್ದು, ಅವುಗಳಲ್ಲಿ ಹಲವು ಬೋಗಿ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಚೀನಾದ ಕಂಪನಿ ಕೋವಿಡ್ ಹಾಗೂ ವಿದೇಶಿ ನೇರ ಹೂಡಿಕೆ, ವ್ಯಾಪಾರ ನಿರ್ಬಂಧ ಮುಂತಾದ ಕಾರಣಗಳಿಂದಾಗಿ ಬೋಗಿ ಪೂರೈಕೆಯನ್ನು ವಿಳಂಬ ಮಾಡಿದೆ. ಬೋಗಿಗಳನ್ನು ಪಶ್ಚಿಮ ಬಂಗಾಳದ ಟಿಟಾಗರ್ ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಂದ ಮೊದಲ ಹಂತದ ಬೋಗಿ ಈಗ ಬಿಡುಗಡೆಯಾಗಿದ್ದು, ಶುಕ್ರವಾರ ನಗರಕ್ಕೆ ಆಗಮಿಸಲಿದೆ.