ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರ ಹಿಡಿಯಲಿವೆ ಎಂದು ಅಂದಾಜಿಸಿತ್ತು.ಆದರೆ ಮಂಗಳವಾರ ನಡೆದ ಮತ ಎಣಿಕೆಯ ಬಳಿಕ ಬೇರೆಯ ಫಲಿತಾಂಶ ಬಂದಿದೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅಘಾತ ಉಂಟು ಮಾಡಿದೆ. ಬಿಜೆಪಿ ರಾಜ್ಯದಲ್ಲಿ 3ನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ.
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. 3.45ರ ಬಿಜೆಪಿ 50, ಕಾಂಗ್ರೆಸ್ 35, ಐಎನ್ಎಲ್ಡಿ 2, ಇತರರು 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮಾಹಿತಿಯಂತೆ ಬಿಜೆಪಿ 17, ಕಾಂಗ್ರೆಸ್ 15, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದು 90ರ ಪೈಕಿ 34 ಕ್ಷೇತ್ರದ ಫಲಿತಾಂಶ ಘೋಷಣೆಯಾಗಿದೆ.
ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ವಿಫಲವಾಗಿದೆ. ಆದರೆ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಅವರು 108539 ಮತಗಳನ್ನು ಪಡೆದಿದ್ದು, 71,465 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಭೂಪಿಂದರ್ ಸಿಂಗ್ ಹೂಡಾ 108539, ಬಿಜೆಪಿ ಅಭ್ಯರ್ಥಿ ಮಂಜು 37,074, ಐಎನ್ಎಲ್ಡಿಯ ಕೃಷ್ಣಾ 1,496 ಮತಗಳನ್ನು ಪಡೆದಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಭೂಪಿಂದರ್ ಸಿಂಗ್ ಹೂಡಾ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಈಗಾಗಲೇ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಒಂದು ವೇಳೆ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಕುಮಾರಿ ಸೆಲ್ಜಾ ಅಥವ ಭೂಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗುವ ಸಾಧ್ಯತೆ ಇತ್ತು. ಇಬ್ಬರು ರಾಜ್ಯದ ಪ್ರಭಾವಿ ನಾಯಕರಾಗಿದ್ದರು. ಇದೇ ವಿಚಾರಕ್ಕೆ ಇಬ್ಬರು ನಾಯಕರ ನಡುವೆ ನಡೆಯುತ್ತಿದ್ದ ಜಟಾಪಟಿ ಗುಟ್ಟಾಗಿ ಉಳಿದಿರಲಿಲ್ಲ. ಇದೇ ಕಾರಣಕ್ಕೆ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭೂಪಿಂದರ್ ಸಿಂಗ್ ಹೂಡಾ ಸದ್ಯ ರಾಜ್ಯದ ವಿರೋಧ ಪಕ್ಷದ ನಾಯಕರು. ಈಗ ವಿಧಾನಸಭೆಯಲ್ಲಿ ಪುನಃ ಕಾಂಗ್ರೆಸ್ ವಿರೋಧ ಪಕ್ಷವಾಗಲಿದೆ. ಆದ್ದರಿಂದ ಪುನಃ ಭೂಪಿಂದರ್ ಸಿಂಗ್ ಹೂಡಾ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಸರ್ಕಾರ ರಚನೆ ಮಾಡಲು ತಯಾರಿ ನಡೆಸಿದ್ದು, ಹಾಲಿ ಮುಖ್ಯಮಂತ್ರಿ ನಯಾಬ್ ಸೈನಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಸತತ ಮೂರು ಬಾರಿ ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಹ್ಯಾಟಿಕ್ ಗೆಲುವು ಸಾಧಿಸಿದೆ. 2024ರ ಮಾರ್ಚ್ನಲ್ಲಿ ಹರಿಯಾಣದಲ್ಲಿ ಬಿಜೆಪಿ ಮುಖ್ಯಮಂತ್ರಿ ಬದಲಾವಣೆ ಮಾಡಿತ್ತು. ಆದ್ದರಿಂದ ಈಗ ಚುನಾವಣೆ ನಡೆದರೂ ಅದೇ ಮುಖ್ಯಮಂತ್ರಿಯನ್ನು ಮುಂದುವರೆಸಲಿದೆ.