ಬೆಂಗಳೂರು: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಚುಮುಚುಮು ಚಳಿಯಲ್ಲಿ ಬೆಳ್ಳಂ ಬೆಳಗ್ಗೆ ಒಂದು ಕಪ್ ಕಾಫಿ ಇದ್ದರೆ ಬೆಸ್ಟ್ ಅನಿಸುತ್ತೆ. ಆದರೆ, ಇನ್ಮುಂದೆ ಈ ಬಿಸಿ ಕಾಫಿ ಜನರ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ. ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಕಾಫಿಪುಡಿ ಬೆಲೆ ಒಂದು ಕೆಜಿಗೆ ಸಾವಿರ ರೂಪಾಯಿ ಗಡಿಯನ್ನ ಈಗಾಗಲೇ ದಾಟಿದೆ. ದರ 1200 ರೂ,ವರೆಗೂ ಹೋಗುವ ನಿರೀಕ್ಷೆ ಇದೆ. 2022ರಲ್ಲಿ ಕೆಜಿಗೆ 300-400 ರೂಪಾಯಿ ಇದ್ದ ಕಾಫಿಪುಡಿ ಬೆಲೆ ಇದೀಗ ಏಕಾಏಕಿ ಏರಿಕೆಯಾಗಿದೆ. ಕಳೆದ ಒಂದೇ ವರ್ಷದಲ್ಲಿ ಕೆಜಿ ಕಾಫಿಪುಡಿ ಬೆಲೆ 200 ರೂಪಾಯಿವರೆಗೆ ಹೆಚ್ಚಳವಾಗಿದೆ.
ಕಾಫಿಪುಡಿ ಬೆಲೆ ಏರಿಕೆಗೆ ಪ್ರಮುಖ ಕಾರಣ
- ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಬ್ರೆಜಿಲ್,ವಿಯ್ನಟಾಂಗಳಲ್ಲಿ ಕಾಫಿ ಬೆಳೆ ಕುಂಠಿತವಾಗಿರುವುದು
- ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆಯಾಗಿ ಕಾಫಿ ಹೂವುಗಳು ಉದುರಿದ್ದು ಕಾಫಿ ಬೀಜಗಳ ಅಭಾವ
- ಕಾಫಿ ಬೆಳೆಗಾರರು ಎದುರಿಸುತ್ತಿರುವ ಕೆಲಸಗಾರರ ಸಮಸ್ಯೆಯಿಂದ ಇಳುವರಿ ಮೇಲೆ ಪರಿಣಾಮ
ಹೋಟೆಲ್ಗಳಲ್ಲಿ ಕಾಫಿ ದರ ಏರಿಕೆ?
ಕಾಫಿಪುಡಿ ದರ ನಿರಂತರವಾಗಿ ಏರಿಕೆ ಆಗುತ್ತಿರೋದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು,ಕಾಫಿಪುಡಿ ದರ ಇದೇ ರೀತಿ ಏರಿಕೆ ಆಗುತ್ತಿದ್ದರೆ, ಅನಿವಾರ್ಯವಾಗಿ ಕಾಫಿ ದರವೂ ಹೆಚ್ಚಳವಾಗಲಿದೆ. ಈಗಾಗಲೇ ಹೋಟೆಲ್ ಮತ್ತು ಕ್ಯಾಂಟೀನ್ ಗಳಲ್ಲಿ ಒಂದು ಕಾಫಿ ಬೆಲೆ 12ರಿಂದ 15 ರೂಪಾಯಿ, 15ರಿಂದ 17 ರೂಪಾಯಿ, 18ರಿಂದ 20 ರೂಪಾಯಿ ವರೆಗೆ ಏರಿಕೆ ಆಗಿದೆ. ಮತ್ತೆ ಕಾಫಿ ಪುಡಿ ದರ ಏರಿಕೆ ಆದರೆ 15ರಿಂದ 25 ರೂಪಾಯಿವರೆಗೆ ದರ ಏರಿಕೆ ಆಗುವ ಸಾಧ್ಯತೆಗಳಿವೆ. ಮುಂದಿನ ತಿಂಗಳು ಮತ್ತೆ ಕೆಜಿಗೆ 150-200 ರೂಪಾಯಿ ವರೆಗೆ ಕಾಫಿಪುಡಿ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಫಿಪುಡಿ ಬೆಲೆ ಏರಿಕೆ ಕೇವಲ ವ್ಯಾಪಾರಸ್ಥರಿಗೆ ಮಾತ್ರ ನೋವು ಉಂಟುಮಾಡಿಲ್ಲ, ಕಾಫಿ ಪ್ರಿಯರಿಗೂ ಇದರ ಬಿಸಿ ತಟ್ಟಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಕಾಫಿ ಪ್ರಿಯರು, ಈ ಹಿಂದೆ ಮೂವರು ಹೋಟೆಲ್ಗೆ ಬಂದ್ರೆ ಮೂರು ಕಾಫಿ ಆರ್ಡರ್ ಮಾಡ್ತಿದ್ವಿ ಆದರೆ ಈಗ ಎರಡು ಕಾಫಿ ತಗೊಂಡು ಶೆರ್ ಮಾಡಿಕೊಳ್ಳುತ್ತಿದ್ದೀವಿ. ಡಿಸೆಂಬರ್ನಲ್ಲಿ ಮತ್ತೆ ಕಾಫಿ ದರ ಏರಿಕೆ ಆದರೆ ಒಂದು ಕಾಫಿಯಲ್ಲಿ ಮೂವರು ಕುಡಿಯಬೇಕು ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
For More Updates Join our WhatsApp Group :
