ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ , ನಿರ್ಮಲಾ ಸೀತರಾಮನ್ ಬಗ್ಗೆ ಬಹಳ ಗೌರವ ಇತ್ತು. ರಾಜ್ಯಕ್ಕೆ ಹಣ ಕೊಡ್ತಾರೆ, ಯೋಜನೆ ಕೊಡ್ತಾರೆ ಅಂತಾ ಭಾವಿಸಿದ್ದೇವು.
ಆದರೆ ಅವರು ಗಮನ ಸೆಳೆದಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೇವಲ ಬಿಹಾರಕ್ಕೆ ಆಂಧ್ರಕ್ಕೆ ಗಮನ ಹರಿಸಿದ್ದಾರೆ ಅಷ್ಟೇ. ಬೇರೆ ರಾಜ್ಯಗಳಲ್ಲಿ, ಅದರಲ್ಲು I.N.D.I.A ಒಕ್ಕೂಟದ ಸರ್ಕಾರಗಳು ಇರುವ ರಾಜ್ಯಗಳ ಕಡೆ ಗಮನ ಹರಿಸಿಲ್ಲ, ಕಾಂಗ್ರೆಸ್ ಇರೋ ರಾಜ್ಯದಲ್ಲಿ ಗಮನ ಹರಿಸಿಲ್ಲ. ಇದು ಖಂಡನೀಯ ಇದರ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.
ಇತ್ತ ಕೇಂದ್ರದ ಬಜೆಟ್ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ನರೇಂದ್ರ ಮೋದಿಯವರ ಬಜೆಟ್ ನಾವು ನೋಡಿದ್ದೇವೆ. ಉದ್ಯೋಗ ಸೃಷ್ಟಿ, ಬಡವರಿಗೆ ಅನ್ನ ಕೊಡೋದು, ಕೃಷಿಗೆ ಒತ್ತು ಕೊಟ್ಟಿದ್ದಾರೆ. ಬಜೆಟ್ ನ್ನು ನಾನು ಸ್ವಾಗತ ಮಾಡ್ತೀನಿ, ಬಿಹಾರ್ ಮತ್ತೆ ಆಂಧ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಆದರೆ ಯಾವುದೇ ತಾರತಮ್ಯ ಮಾಡದೇ ಬಜೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.
ಅಲ್ಲದೇ, ಕೇಂದ್ರ ಬಜೆಟ್ ನಲ್ಲಿ ದೇಶದ ಅಭಿವೃದ್ಧಿ, ರೈತರ ಪರವಾಗಿ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡಿಜಿಟಲ್ ಇಂಡಿಯಾ ಹಾಗೂ ನಗರಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಿಕ್ಷಣ ಉದ್ಯೋಗ 1.48 ಲಕ್ಷ ಕೋಟಿ ಮೀಸಲು ಇಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಬಡವರಿಗೆ ಅನುಕೂಲ ಆಗಲಿದೆ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಮೀಸಲು ಇಡಲಾಗಿದೆ, ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡಲಾಗಿದೆ. ಇದು ಮಧ್ಯಮ ವರ್ಗದವರಿಗೆ ಅನುಕೂಲ ಆಗಲಿದೆ.
ಒಂದು ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಕೊಡಲಾಗ್ತಿದೆ, ಕೈಗಾರಿಕಾ ತೆರಿಗೆ ಕಡಿಮೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ, ಕೃಷಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಗಮನಿಸಿದ್ದೇನೆ, ಆದರೆ ಬೇರೆ ರಾಜ್ಯಗಳಿಗನ್ನು ಕಡೆಗಣಿಸಿಲ್ಲ, ಯಾವುದೇ ತಾರತಮ್ಯ ಮಾಡಿಲ್ಲ ಎಂದು ತಿಳಿಸಿದರು.