ಬಾಗಲಕೋಟೆ: ಸರ್ಕಾರಿ ಇಲಾಖೆಗಳ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಬಾಗಲಕೋಟೆ ಪೊಲೀಸ್ ತನಿಖೆ ಚುರುಕುಗೊಳಿಸಿ ತಪ್ಪಿಸ್ಥರಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
“ಬಾಗಲಕೋಟೆಯ ಪ್ರವಾಸೋದ್ಯಮ, ಅಲ್ಪಸಂಖ್ಯಾತ, ಕಾರ್ಮಿಕರ, ಕೈಮಗ್ಗ-ಜವಳಿ, ಹಿಂದುಳಿದ ವರ್ಗಗಳ ಇಲಾಖೆಗಳ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯ ಐಡಿಬಿಐ ಬ್ಯಾಂಕಿನಲ್ಲಿ ಈ ಐದು ಇಲಾಖೆಗಳ 6.08 ಕೋಟಿ ರೂ. ಹಣವನ್ನು 33 ವಿವಿಧ ಖಾತೆಗಳಿಗೆ ಬ್ಯಾಂಕಿನ ಸಿಬ್ಬಂದಿ ವರ್ಗಾವಣೆ ಮಾಡಿದ್ದರು. ಇಲ್ಲಿಯವರೆಗೆ 9 ಜನ ಬ್ಯಾಂಕ್ ಸಿಬ್ಬಂದಿ ಸೇರಿ 19 ಜನರನ್ನು ಬಂಧನ ಮಾಡಿ, ವಿಚಾರಣೆ ನಡೆಸಲಾಗಿದೆ. 3 ಕೋಟಿ ರೂ.ಗೂ ಅಧಿಕ ಅವ್ಯವಹಾರ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
“ಸರ್ಕಾರದ ಇಲಾಖೆಯ ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದ ನಂತರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೋ, ಇಲ್ಲವೋ ಎಂಬ ಬಗ್ಗೆ ಸೂಕ್ತ ಮಾಹಿತಿ ತಿಳಿದು ಬಂದಿಲ್ಲ. ಈಗ ಸಿಐಡಿಗೆ ವಹಿಸಿರುವುದರಿಂದ ಅಧಿಕಾರಿಗಳಿಗೆ ಭಯ ಪ್ರಾರಂಭವಾಗಿದೆ. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಸಿಐಡಿಗೆ ನೀಡಲಾಗಿದೆ” ಎಂದು ಎಸ್ಪಿ ತಿಳಿಸಿದರು.