ಜಾತ್ರೆ ವೇಳೆ ಬೈಕ್ ಹಾಯ್ದು ಅಪಘಾತ : ಮೂವರು ಯುವಕರು ಸಾವು

ಕುಂಟೋಜಿಯಲ್ಲಿ ಅಪಘಾತ

ವಿಜಯಪುರ: ನಿರ್ಲಕ್ಷ್ಯ ಮತ್ತು ಅಪಾಯಕಾರಿ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಬಳಿ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲಗಲದಿನ್ನಿ ಗ್ರಾಮದ ಉದಯಕುಮಾರ (19), ಹಂಚಲಿ ಅನಿಲ ಕೈನೂರ (27) ಮತ್ತು ಗೊಟಖಂಡಕಿ ನಿಂಗರಾಜ ಚೌಧರಿ (22) ಮೃತಪಟ್ಟವರು. ಮಲಗಲದಿನ್ನಿಯ ರಾಯಪ್ಪ ಮಹಾಂತೇಶ ಬಾಗೇವಾಡಿ (24), ಹಣಮಂತ ಹುಲ್ಲಪ್ಪ ಕುರಬಗೌಡರ (18), ಪ್ರಶಾಂತ ಹುಲ್ಲಪ್ಪ ಕುರಬಗೌಡರ (16), ಶಾಹೀದ್ ಕಾಶಿಮಸಾಬ ಹುನಗುಂದ (18) ಮತ್ತು ನಾಗಬೇನಾಳ ಗ್ರಾಮದ ಶಂಕ್ರಪ್ಪ ಯಮನಪ್ಪ ಕೊಂಡಗೂಳಿ (19) ಗಾಯಗೊಂಡವರು.

ನಿಂಗರಾಜ ಮತ್ತು ಅನಿಲ್ ಅಪಾಯಕಾರಿಯಾಗಿ ಬೈಕ್ ಚಲಾಯಿಸಿ ರಸ್ತೆ ಬದಿ ನಿಂತಿದ್ದವರಿಗೆ ಡಿಕ್ಕಿ ಹೊಡೆದರು ಎನ್ನಲಾಗುತ್ತಿದೆ.

ಜಾತ್ರೆ ವೇಳೆ ಅವಘಡ: ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ, ನಾಟಕ ನೋಡಲು ಅಕ್ಕಪಕ್ಕದ ಊರುಗಳಿಂದ ಯುವಕರು ಆಗಮಿಸಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *