ಬೆಂಗಳೂರು: ಸದ್ಯ ಆರ್ಎಸ್ಎಸ್ ವಿಚಾರವಾಗಿ ಸಚಿವರು ಹಾಗೂ ಆಡಳಿತರೂಢ ಕಾಂಗ್ರೆಸ್ ಶಾಸಕರು ಮತ್ತು ವಿಪಕ್ಷ ನಾಯಕರ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಅದರಲ್ಲೂ ಪ್ರಮುಖವಾಗಿ ಆರ್ಎಸ್ಎಸ್ನಿಂದ ಬಂದಿರುವ ಬಿಜೆಪಿ ವಿಧಾನಪರಿಷತ್ ಸದ್ಯ ರವಿಕುಮಾರ್ ಸಹ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.ಈ ನಡುವೆ ಇದೇ ರವಿಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಹೌದು…ರವಿಕುಮಾರ್ ಅವರು ಸಿಎಂ ನಿವಾಸ ಕಾವೇರಿಯಿಂದ ವಿಧಾನಸೌಧಕ್ಕೆ ಸಿದ್ದರಾಮಯ್ಯನವರ ಕಾರಿನಲ್ಲೇ ಆಗಮಿಸಿದ್ದಾರೆ. ಸಿದ್ದರಾಮಯ್ಯನವರ ಹಿಂಬದಿಯಲ್ಲಿ ಕುಳಿತುಕೊಂಡು ಅವರೊಡನೆ ಆತ್ಮೀಯವಾಗಿ ಮಾತನಾಡುತ್ತ ವಿಧಾನಸೌಧಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಸಿದ್ದರಾಮಯ್ಯನವರ ಕಾರಿನಲ್ಲಿ ಸಚ್ಚೇತಕ ಅಶೋಕ್ ಪಟ್ಟಣ, ಸಚಿವರಾದ ಭೈರತಿ ಸುರೇಶ್ ಇಲ್ಲ ಜಮೀರ್ ಅಹಮದ್ ಖಾನ್ ಸೇರಿದಂತೆ ಇತರೆ ಕಾಂಗ್ರೆಸ್ ಪ್ರಮುಖ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ, ಇಂದು ಕಾರಿನಲ್ಲಿ ರವಿಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೇ ಮಾತನಾಡುತ್ತಾ ಬಂದಿರುವುದು ಕುತೂಹಲ ಮೂಡಿಸಿದೆ.
ಇನ್ನು ರಾಜಕೀಯದಲ್ಲಿ ಯಾರು ಕೂಡ ಶಾಶ್ವತವಾಗಿ ಮಿತ್ರರೂ ಅಲ್ಲ ಮತ್ತು ಶತ್ರುಗಳು ಅಲ್ಲ ನಿಜ. ಆದ್ರೆ, ಕಟುವಾಗಿ ಟೀಕಿಸುವ ವಿರೋಧ ಪಕ್ಷದ ನಾಯಕರುಗಳು ಅಷ್ಟು ಸುಲಭವಾಗಿ ಮುಖ್ಯಮಂತ್ರಿ ಕಾರು ಹತ್ತಲ್ಲ. ಹೀಗಾಗಿ ಇದೊಂದು ಅಪರೂಪ ಅಂತಾನೇ ಹೇಳಬಹುದು.
ಆದ್ರೆ, ರವಿಕುಮಾರ್ ಸಿಎಂ ನಿವಾಸ ಕಾವೇರಿ ನಿವಾಸಕ್ಕೆ ಏಕೆ ಹೋಗಿದ್ದರು? ಹಾಗೇ ಅವರ ಕಾರಿನಲ್ಲೇ ವಿಧಾನಸೌಧಕ್ಕೆ ಆಗಮಿಸಿದ್ಯಾಕೆ ಎನ್ನುವ ಬಗ್ಗೆ ತಿಳಿದುಬಂದಿಲ್ಲ. ಯಾವದೋ ಕೆಲಸದ ಸಲುವಾಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಹೋಗಿದ್ದಾರೆ ಅನ್ಸುತ್ತೆ. ಆ ವೇಳೆ ಸಿಎಂ ಜತೆಗೆ ಕಾರಿನಲ್ಲಿ ಮಾತನಾಡಿಕೊಂಡು ಬಂದಿರುವ ಸಾಧ್ಯತೆಗಳಿವೆ.
For More Updates Join our WhatsApp Group :
