BJP ಕಾರ್ಯಕರ್ತನ ಮನೆಯ ಆವರಣದಲ್ಲಿ ನಡೆದ ಘಟನೆ.
ಕಲಬುರಗಿ: ಕಲಬುರಗಿ ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಈ ಘಟನೆ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ ಅವರ ಮನೆಯ ಆವರಣದಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ಬಳಿಕ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ನಡೆದ ಮಲ್ಲಿನಾಥ್ ಬಿರಾದಾರರ ಮನೆ ನಂದಿಕೂರ್ ಗ್ರಾಮದಲ್ಲಿದ್ದು, ಘಟನೆ ನಂತರ ಕುಟುಂಬಸ್ಥರು ಮನೆ ಖಾಲಿ ಮಾಡಿಕೊಂಡು ತೆರಳಿದ್ದಾರೆ. ಸದ್ಯ ಮನೆಗೆ ಬೀಗ ಹಾಕಲಾಗಿದ್ದು, ಸ್ಥಳದಲ್ಲಿ ನಿಶ್ಯಬ್ದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸ್ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಜ್ಯೋತಿ ಪಾಟೀಲ್ ತಡರಾತ್ರಿ ಮಲ್ಲಿನಾಥ್ ಬಿರಾದಾರರ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಮಲ್ಲಿನಾಥ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಜ್ಯೋತಿ ಪಾಟೀಲ್ ಬಾಗಿಲು ಬಡಿದಿದ್ದರು. ಮಲ್ಲಿನಾಥ್ ಬಿರಾದಾರ್ ಪತ್ನಿ, ಮೂವರು ಮಕ್ಕಳು ಮನೆಯಲ್ಲಿ ವಾಸಮಾಡುತ್ತಿದ್ದರು. ಇವರು ಬಾಗಿಲು ತೆರೆದ ತಕ್ಷಣ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿ ಪಾಟೀಲ್ ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿದ್ದಾರೆ. ಆದರೆ ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಪತಿ ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಅವರ ಪತಿ ಚಿದಾನಂದ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಎಂದು ನನಗೆ ಅನಿಸುತ್ತಿಲ್ಲ. ಅವಳು ಯಾಕೆ ಪೆಟ್ರೋಲ್ ಸುರಿದುಕೊಂಡು ಸಾಯಬೇಕು? ಇದು ಕೊಲೆ ಆಗಿರಬಹುದೆಂಬ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




