ಭಾರತ: ಕೇಂದ್ರ ಬಿಜೆಪಿ ಸರ್ಕಾರವು 2025-26ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಜೆಟ್ ಮಂಡನೆಯ ಬಗ್ಗೆ ಮಾತನಾಡಿದ್ದು. ಈ ಬಾರಿ ಐತಿಹಾಸಿಕ ಬಜೆಟ್ ಮಂಡನೆ ಮಾಡಲಿದ್ದೇವೆ. ಅಲ್ಲದೆ ದೇಶದ ಯುವಕರಿಗೆ ಭರ್ಜರಿ ಗುಡ್ನ್ಯೂಸ್ ಕೊಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ದೇಶದ ಅಭಿವೃದ್ಧಿಗೆ ಈ ಬಾರಿಯ ಬಜೆಟ್ ಸಹಕಾರಿಯಾಗಲಿದೆ. ಬಜೆಟ್ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಲಿದೆ. ಆದರೆ, ಈ ನಾವು ಯಾವುದೇ ಕಾರಣಕ್ಕೂ ವಿದೇಶಿ ಹಸ್ತಕ್ಷೇಪಕ್ಕೆ ಅವಕಾಶ ಕೊಡುವುದಿಲ್ಲ ಎಂದೂ ಮೋದಿ ಅವರು ಹೇಳಿದ್ದಾರೆ. ಬಜೆಟ್ನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಏನು ಎನ್ನುವ ವಿವರ ಇಲ್ಲಿದೆ.
ಫೆಬ್ರವರಿ 1ರಂದು ಕೇಂದ್ರ ಬಿಜೆಪಿ ಸರ್ಕಾರವು ಈ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದೆ. ಈ ಬಾರಿಯ ಬಜೆಟ್ ಹಲವು ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ದೇಶದಲ್ಲಿನ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಹಣದುಬ್ಬರ ಹಾಗೂ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಕ್ಕೆ ಈ ಬಾರಿಯ ಬಜೆಟ್ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ದೇಶದಲ್ಲಿ ತೆರಿಗೆಗಳು ಹೆಚ್ಚಾಗುತ್ತಿವೆ. ನಿರಂತರ ಬೆಲೆ ಏರಿಕೆ ಹಾಗೂ ಹಣದುಬ್ಬರದ ಪರಿಸ್ಥಿತಿಯಿಂದಾಗಿ ಮಧ್ಯಮ ವರ್ಗದವರು ಜೀವನ ನಡೆಸುವುದು ಸವಾಲಾಗಿದೆ ಎನ್ನುವ ಕೂಗು ಇದೆ. ಹೀಗಾಗಿ ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ರೀತಿಯ ಬಜೆಟ್ ಮಂಡನೆ ಮಾಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಭಾರತದ ಸರ್ವತೋಮುಖ ಅಭಿವೃದ್ಧಿಯ ಮೇಲೆ ಕೇಂದ್ರ ಸರ್ಕಾರದ ಗಮನ ಇದೆ. ಭೌಗೋಳಿಕ, ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ಕೊಡುತ್ತಿದ್ದೇವೆ. ಹೊಸ ಹಾಗೂ ಹೂಡಿಕೆಗೆ ಆದ್ಯತೆ ಕೊಟ್ಟಿದ್ದೇವೆ. ಈ ಬಾರಿಯ ಬಜೆಟ್ನಲ್ಲಿ ನಾವು ಯುವಕರಿಗೆ ಒಳ್ಳೆಯ ಅವಕಾಶ ಹಾಗೂ ಮಹಿಳೆಯರಿಗೆ ರಕ್ಷಣೆ ಕೊಡುವುದಕ್ಕೆ ಆದ್ಯತೆ ಕೊಡಲಿದ್ದೇವೆ ಎಂದಿದ್ದಾರೆ. ದೇಶದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾಜದಲ್ಲಿ ಅವರಿಗೆ ರಕ್ಷಣೆ ಹಾಗೂ ಗೌರವವನ್ನು ಹೆಚ್ಚಿಸುವ ಐತಿಹಾಸಿಕ ಮಸೂದೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಯುವಕರಿಗೆ ವಿಕಸಿತ ಭಾರತ: ಈ ಬಾರಿಯ ಬಜೆಟ್ನಲ್ಲಿ ವಿಕಸಿತ ಭಾರತಕ್ಕೆ ಆದ್ಯತೆ ನೀಡುತ್ತಿದ್ದೇವೆ. ಇಂದಿನ ಯುವಕ / ಯವತಿಯರು 50 ವರ್ಷಕ್ಕೆ ಬರುವ ಸಂದರ್ಭದಲ್ಲಿ ವಿಕಸಿತ ಭಾರತ ನಿರ್ಮಾಣವಾಗಲಿದೆ. ಭಾರತದ ವಿಕಸಿತ ಭಾರತ ಪರಿಕಲ್ಪನೆಯ ಲಾಭ ಯುವಕರಿಗೆ ಸಿಗಲಿದೆ. 20ರಿಂದ 25 ವರ್ಷ ವಯಸ್ಸಿನಲ್ಲಿರುವವರಿಗೆ ಉಜ್ವಲ ಭವಿಷ್ಯ ನಿರ್ಮಾಣವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಜೆಟ್ನ ಕುತೂಹಲ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. 2014ರ ನಂತರ ಭಾರತದ ವ್ಯವಹಾರಗಳಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟಿಲ್ಲ. ಇನ್ನು ಇದು ಮೊದಲ ಸಂಸತ್ ಅಧಿವೇಶನವಾಗಿದೆ. ಈ ಸಂದರ್ಭದಲ್ಲಿ ಕೆಲವರು ಅಶಾಂತಿ ಸೃಷ್ಟಿ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದೇ ವಿದೇಶಿ ಹಸ್ತಕ್ಷೇಪಕ್ಕೆ ಅವಕಾಶ ಕೊಡುವುದಿಲ್ಲ. 2014 ರಿಂದ ಪ್ರತಿ ಬಜೆಟ್ ಅಧಿವೇಶನದ ಸಂದರ್ಭದಲ್ಲೂ ವಿದೇಶಿ ಶಕ್ತಿಗಳು ಮಧ್ಯಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಿವೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ಆದರೆ ಈ ಬಾರಿ ನಾವು ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ ಎಂದಿದ್ದಾರೆ.