ನವದೆಹಲಿ: ಹಣದಲ್ಲಿ ಶ್ರೀಮಂತರಾದವರು ಮನಸ್ಸಿನಲ್ಲಿ ಶ್ರೀಮಂತರಾಗಬೇಕೆಂದಿಲ್ಲ. ಎರಡರಲ್ಲೂ ಶ್ರೀಮಂತಿಕೆ ಹೊಂದಿರುವವರು ಬಹಳ ಅಪರೂಪ. ಇಂತಹ ಅಪರೂಪರಲ್ಲಿ ಗುಜರಾತ್ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ ಒಬ್ಬರು. ಸ್ವರ್ಗಸ್ಥರಾದ ತನ್ನ ತಾಯಿಯನ್ನು ಖುಷಿಪಡಿಸಲು ಇವರು ತಮ್ಮ ಊರಿನ ಎಲ್ಲಾ ಜನರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಈ ಮೂಲಕ 30 ವರ್ಷಗಳಿಂದ ಬ್ಯಾಂಕಿಗೆ ಊರಿನ ಜನರು ಅಡಮಾನವಾಗಿ ಇಟ್ಟಿದ್ದ ಜಮೀನು ಪತ್ರವನ್ನು ಅವರಿಗೆ ಮರಳಿ ಸಿಗುವಂತೆ ಮಾಡಿದ್ದಾರೆ.
ಅಮರೇಲಿ ಜಿಲ್ಲೆಯ ಸವರಕುಂಡ್ಲ ತಾಲೂಕಿನ ಜೀರಾ ಗ್ರಾಮದ ಬಾಬುಭಾಯ್ ಜೀರಾವಾಲ ಅವರು ಒಟ್ಟು 290 ರೈತರನ್ನು ಸಾಲಮುಕ್ತರನ್ನಾಗಿಸಿದ್ದಾರೆ. ಇದಕ್ಕಾಗಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ಗೆ 90 ಲಕ್ಷ ರೂ ಹಣವನ್ನು ಕಟ್ಟಿದ್ದಾರೆ. 30 ವರ್ಷಗಳಿಂದ ಸಾಲದ ಬವಣೆಯಲ್ಲಿದ್ದ ರೈತರು ಈಗ ನಿರಾಳಗೊಂಡಿದ್ದಾರೆ.
ತಮ್ಮದಲ್ಲದ ಸಾಲಕ್ಕಿ ಸಿಲುಕಿದ್ದ ರೈತರು…
ತೊಂಬತ್ತರ ದಶಕದಲ್ಲಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ನ ಅಂದಿನ ಸಮಿತಿ ಅಧಿಕಾರಿಗಳು ರೈತರ ಹೆಸರಿನಲ್ಲಿ ಮೋಸದಿಂದ ಸಾಲ ಪಡೆದುಕೊಂಡಿದ್ದರು. ತಮ್ಮದಲ್ಲದ ಸಾಲದ ಹೊರೆ ತಮ್ಮ ಮೇಲಿದ್ದುದು ರೈತರಿಗೆ ಹತಾಶೆ ಮೂಡಿಸಿತ್ತು. ಬ್ಯಾಂಕ್ ಮತ್ತು ರೈತರ ನಡುವಿನ ಈ ಸಾಲ ವ್ಯಾಜ್ಯ 1995ರಿಂದಲೂ ನಡೆಯುತ್ತಿದೆ. ಇನ್ನೂ ಇತ್ಯರ್ಥವಾಗಿಲ್ಲ. 299 ರೈತರ ಜಮೀನು ಪತ್ರವೂ ಬ್ಯಾಂಕ್ ಸುಪರ್ದಿಯಲ್ಲಿತ್ತು.
ತಮ್ಮದಲ್ಲದ ಈ ಸಾಲದಿಂದಾಗಿ ಜೀರಾ ಗ್ರಾಮದ ರೈತರಿಗೆ ಬೇರೆ ಬ್ಯಾಂಕುಗಳಲ್ಲಿ ಸಾಲವೂ ಸಿಗುತ್ತಿರಲಿಲ್ಲ. ಸರ್ಕಾರದಿಂದಲೂ ನೆರವು ಸಿಗುತ್ತಿರಲಿಲ್ಲ. ಅಷ್ಟೇ ಅಲ್ಲ, ಇದೇ ಸಾಲದ ಕಾರಣದಿಂದಾಗಿ ಜಮೀನು ಹಂಚಿಕೆಯೂ ಸಾಧ್ಯವಾಗುತ್ತಿರಲಿಲ್ಲ.
For More Updates Join our WhatsApp Group :
