ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾ ವೈಭವದ ವೇಳೆ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಇಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಭಾರ ಹೊರುವ ತಾಲೀಮಿಗೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯ ಬಳಿ ಚಾಲನೆ ನೀಡಲಾಯಿತು.
ಜಂಬೂ ಸವಾರಿಯಲ್ಲಿ ಸುಮಾರು 900 ಕೆ.ಜಿ ತೂಕದ ಅಂಬಾರಿ ಹೊತ್ತು ಅಭಿಮನ್ಯು ಸಾಗಲಿದ್ದಾನೆ. ಅಭಿಮನ್ಯುವಿಗೆ ನಮ್ದಾ, ಗಾದಿ ಹಾಗೂ ಬೆನ್ನಿನ ಮೇಲೆ ತೊಟ್ಟಿಲು ಕಟ್ಟಲಾಗಿದೆ. ಆ ತೊಟ್ಟಿಲಿಗೆ ಸುಮಾರು 525 ಕೆ.ಜಿ ತೂಕದ ಮರಳು ಮೂಟೆ ಚೀಲಗಳನ್ನಿಟ್ಟು ತಾಲೀಮು ನಡೆಸಲಾಗಿದೆ.
ಅಭಿಮನ್ಯುವಿಗೆ ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ವರಲಕ್ಷ್ಮೀ ಸಾಥ್ ನೀಡಿದವು. ಅರಮನೆ ಆವರಣದಿಂದ ಭಾರ ಹೊತ್ತ ಗಜಪಡೆ ಅರಮನೆ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆರ್ಯುವೇದಿಕ್ ಸರ್ಕಲ್ ಮೂಲಕ ಬನ್ನಿಮಂಟಪ ತಲುಪಿದವು. ಹಂತ-ಹಂತವಾಗಿ ಮರಳು ಮೂಟೆ ಭಾರವನ್ನು ಹೆಚ್ಚಿಸಲಾಯಿತು. ಗೌರಿ-ಗಣೇಶ ಹಬ್ಬದ ನಂತರ ಮರದ ಅಂಬಾರಿ ತಾಲೀಮು ನಡೆಸಲಾಗುತ್ತದೆ. ಬಳಿಕ ಆನೆಗಳು ಶಬ್ದಕ್ಕೆ ಹೆದರದ ರೀತಿಯಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, “ಸುಮಾರು 525 ಕೆ.ಜಿ ತೂಕದ ಮರಳಿನ ಮೂಟೆ ಹಾಕಿ ತಾಲೀಮು ಆರಂಭಿಸಿದ್ದೇವೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಕಂಜನ್ ಆನೆ ಕಾಲು ನೋವಿನಿಂದ ಬಳಲುತ್ತಿದ್ದು ಸ್ವಲ್ಪ ವಿಶ್ರಾಂತಿ ನೀಡಲಾಗಿದೆ” ಎಂದರು.
ಕಳೆದ 27 ವರ್ಷಗಳಿಂದ ದಸರಾ ಗಜಪಡೆಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, “ಗಜಪಡೆ ಸಾಗುವ ಮಾರ್ಗದಲ್ಲಿ ಕಬ್ಬಿಣದ ಮುಳ್ಳು-ತಂತಿ ಬೇರೆ ಅಪಾಯಕಾರಿ ವಸ್ತುಗಳು ಸಿಕ್ಕರೆ ಅದನ್ನು ತೆಗೆದು ಕಸದ ಬುಟ್ಟಿಗೆ ಹಾಕಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.