ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದು

High court of Karnataka

High court of Karnataka

ಬೆಂಗಳೂರು: ತ್ಯಾಜ್ಯ ನೀರನ್ನು ಮುಲ್ಲಾಮಾರಿ ನದಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತ ಸಕ್ಕರೆ ಕಾರ್ಖಾನೆ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ರದ್ದು ಕೋರಿ ಕಾರ್ಖಾನೆಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ನಿರ್ದೇಶಕ ರಾಮನಗೌಡ ಯತ್ನಾಳ್, ಜನರಲ್ ಮ್ಯಾನೇಜರ್ ಶಿವಕುಮಾರ್ ಪಾಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಪ್ರಕಟಿಸಿತು.

ಇದರೊಂದಿಗೆ ಸಿದ್ಧಸಿರಿ ಸಕ್ಕರೆ ಕಾರ್ಖಾನೆ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರ ವಿರುದ್ಧ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಎಲ್ಲಾ ನ್ಯಾಯಿಕ ಪ್ರಕ್ರಿಯೆಗಳು ರದ್ದುಗೊಂಡಿವೆ.

ಕಾರ್ಖಾನೆಯ ತ್ಯಾಜ್ಯವನ್ನು ಮುಲ್ಲಾಮಾರಿ ನದಿಗೆ ಹರಿಸಲಾಗುತ್ತಿದೆ. ಅಲ್ಲದೇ ಪರಿಸರ ಹಾಗೂ ಮಾಲಿನ್ಯ ನಿಯಮಗಳನ್ನು ಪಾಲಿಸದೆ ಎಥೆನಾಲ್ ಘಟಕ ಆರಂಭಿಸಲಾಗಿದೆ. ತ್ಯಾಜ್ಯವನ್ನು ಅವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದು ನೀರಿನ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ವಲಯದ ಉಪ ಪರಿಸರ ಅಧಿಕಾರಿ ಡಾ.ಆದಮ್ ಸಾಬ್ ಎಂ.ಪಟೇಲ್ ‘ಜಲ (ಮಾಲಿನ್ಯ ತಡೆ) ಕಾಯ್ದೆ-1974ರ ಸೆಕ್ಷನ್ 49 ಹಾಗೂ ಸಿಆರ್‌ಪಿಸಿ ಸೆಕ್ಷನ್ 200’ ಅಡಿ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಸಂಜ್ಞೆಯ ಅಪರಾಧವನ್ನಾಗಿ ಪರಿಗಣಿಸಿದ್ದ ಚಿಂಚೋಳಿ ಜೆಎಂಎಫ್‌ಸಿ ನ್ಯಾಯಾಲಯ, ಪ್ರಕರಣವನ್ನು ವಿಚಾರಣೆ ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published. Required fields are marked *