ಫ್ರೆಂಚ್ ಫ್ರೈಸ್ ತಿನ್ನಲು ಬಿಡದ್ದಕ್ಕೆ ಪತಿಯ ವಿರುದ್ಧ ‘ಕ್ರೌರ್ಯ’ದ ಕೇಸ್

french fries

ಬೆಂಗಳೂರು: ಫ್ರೆಂಚ್‌ ಫ್ರೈಸ್‌ ತಿನ್ನಲು ಅವಕಾಶ ನೀಡದ್ದಕ್ಕೆ ಪತ್ನಿಯಿಂದ ಕ್ರೌರ್ಯದ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಹೈಕೋರ್ಟ್ ಧಾವಿಸಿದ್ದು, ತನಿಖೆಗೆ ತಡೆ ನೀಡಿದೆ.

ಬೆಂಗಳೂರಿನ 36 ವರ್ಷದ (ಸದ್ಯ ಅಮೆರಿಕದ ಟೆಕ್ಸಾಸ್‌ನಲ್ಲಿ ಉದ್ಯೋಗಿ) ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿದೆ.

ಮದುವೆಯಾದ ನಂತರ ಪತ್ನಿಯನ್ನು ಅವಲಂಬಿತ ವೀಸಾದಡಿ ಅಮೆರಿಕಕ್ಕೆ ಕರೆದುಕೊಂಡು ಹೋದೆ. ನಮಗೀಗ ಮಕ್ಕಳೂ ಇವೆ. ನನ್ನ ಪತ್ನಿ ಅತ್ಯಂತ ಕಠಿಣ ಸ್ವಭಾವದವಳಿದ್ದಾಳೆ. ನನಗೆ ಸರಿಯಾಗಿ ಅಡುಗೆ ಮಾಡಿ ಉಣಬಡಿಸುವುದಿಲ್ಲ. ಕೇಳಿದರೆ, ನೀನೇನು ನನ್ನ ಅಡುಗೆ ಮಾಡಿ ಹಾಕುವುದಕ್ಕೆ ಮದುವೆಯಾಗಿದ್ದೀಯ ಎಂದು ಜೋರು ಮಾಡುತ್ತಾಳೆ.

ಸದಾ ಮೊಬೈಲ್‌ ಹಿಡಿದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ನಾಟಕಗಳು, ಸೀರಿಯಲ್‌ಗಳು, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂಗಳ ವೀಕ್ಷಣೆಯಲ್ಲೇ ಮುಳುಗಿರುತ್ತಾಳೆ. ತನ್ನ ಸೋದರ ಸಂಬಂಧಿಗಳ ಜೊತೆ ರೀಲ್ಸ್‌ ಮಾಡುವ ಹುಚ್ಚು ಬೇರೆ ಇದೆ. ಅಂಗಡಿಗೆ ಹೋದರೆ ಬೇಕಾಬಿಟ್ಟಿ ಹಣ್ಣು, ಸಾಮಾನುಗಳನ್ನು ತರುತ್ತಾಳೆ. ಆದರೆ, ಅವುಗಳನ್ನು ಸರಿಯಾಗಿ ಉಪಯೋಗಿಸುವುದಿಲ್ಲ. ನಂತರ ಕಸದ ಬುಟ್ಟಿಗೆ ಎಸೆಯುತ್ತಾಳೆ. ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ.

ನನ್ನ ಮತ್ತು ನನ್ನ ಪೋಷಕರ ವಿರುದ್ಧ ಐಪಿಸಿಯ ಸೆಕ್ಷನ್ 498 ಎ (ಕ್ರೌರ್ಯ) ಅಡಿಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ. ನನಗೆ ಅಮೆರಿಕದಲ್ಲಿ (USA) ಉದ್ಯೋಗವಿದೆ. ಆದರೆ, ನ್ಯಾಯಾಲಯವು ಪತ್ನಿಯ ದೂರಿನ ನಂತರ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ್ದರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಕೀಲ ಶಾಂತಿ ಭೂಷಣ್ ಹೆಚ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ವ್ಯಕ್ತಿ ಹೇಳಿದ್ದು, ತನ್ನ ವಿರುದ್ಧದ ದೂರು ಕ್ಷುಲ್ಲಕವಾಗಿದ್ದು, ತನಿಖೆಗೆ ತಡೆ ನೀಡುವಂತೆ ಕೋರಿದ್ದರು.

ಅರ್ಜಿಯಲ್ಲಿ ಪತಿ, ಪತ್ನಿಯ ಸಣ್ಣ ಸಣ್ಣ ಸಂಗತಿಗಳನ್ನೂ ಪಟ್ಟಿ ಮಾಡಿ ಆಕ್ಷೇಪಿಸಿರುವುದು ಮತ್ತು ವಿಚಾರಣೆ ವೇಳೆ ‘ಫ್ರೆಂಚ್‌ ಫ್ರೈಸ್‌ ತಿನ್ನಲು ಬಿಡುತ್ತಿಲ್ಲ‘ ಎಂಬ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಮೂರ್ತಿಗಳು, ‘ಇದೊಂದು ಕ್ಷುಲ್ಲಕ ವಿಚಾರ‘ ಎಂದು ಮೌಖಿಕವಾಗಿ ಹೇಳಿ ತಡೆ ಆದೇಶ ನೀಡಿದರು.

Leave a Reply

Your email address will not be published. Required fields are marked *