ನವದೆಹಲಿ: ಭಾರತೀಯ ರೈಲ್ವೆಯ 1,23,366 ಹಳಿಯ ಜಾಲದಲ್ಲಿ 68 ಸಾವಿರ ಕಿ.ಮೀ ಉದ್ದದ ಹಳಿಯನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಶೇಕಡಾ 95 ರಷ್ಟು ಎಲೆಕ್ಟ್ರಿಕ್ ಮಾರ್ಗವನ್ನು ಸೃಷ್ಟಿಸುವ ಮೂಲಕ ವಿಶ್ವದಲ್ಲಿಯೇ ‘ಅತಿ ದೊಡ್ಡ ಹಸಿರು ರೈಲು ಮಾರ್ಗ’ವಾಗಿ ಹೊರಹೊಮ್ಮಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯ ಮುಕುಲ್ ಸರನ್ ಮಾಥುರ್, ರೈಲ್ವೆಯಲ್ಲಿ ಪ್ರತಿದಿನ 2 ಕೋಟಿ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ವಲಸೆ ಕಾರ್ಮಿಕರ ನೆರವಿಗಾಗಿ ಇತ್ತೀಚೆಗೆ 5 ಸಾವಿರ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ‘ವಂದೇ ಭಾರತ್’ ದೇಶದ ರೈಲು ಆಧುನೀಕರಣದಲ್ಲಿಯೇ ವಿಶೇಷ ಸಾಧನ ಎಂದು ಬಣ್ಣಿಸಿದ್ದಾರೆ.
ಇಲ್ಲಿ ನಡೆದ ಅಸೋಚಾಮ್ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತೀಯ ರೈಲ್ವೆ ಕ್ಷೇತ್ರವು ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿದೆ. ಈವರೆಗೂ 68 ಸಾವಿರ ಕಿಲೋ ಮೀಟರ್ ಉದ್ದ ಹಳಿಯನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಜಾಲವಾಗಿದೆ. ಇಷ್ಟು ಪ್ರಮಾಣದಲ್ಲಿ ಯಾವುದೇ ದೇಶಗಳು ಎಲೆಕ್ಟ್ರಿಕ್ ವ್ಯವಸ್ಥೆಯನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
2023-24ನೇ ಹಣಕಾಸು ವರ್ಷದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 85 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ. ಗ್ರಾಹಕರ ಮರುಪಾವತಿ ಸೇವೆಯೂ ಒಂದು ಅಥವಾ ಎರಡು ದಿನಕ್ಕೆ ಇಳಿದಿದೆ. ಈ ಹಿಂದೆ ಅದು 7 ದಿನಗಳು ಇತ್ತು. ರೈಲ್ವೇ ಆಧುನೀಕರಣವು ಭಾರತದ ಆರ್ಥಿಕ ಬೆಳವಣಿಗೆ ಇಂಬು ನೀಡಿದೆ. 2047 ರ ವೇಳೆಗೆ ವಿಕಸಿತ ಭಾರತ ಅಥವಾ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ರೈಲ್ವೆಯ ಪಾಲೂ ಇರಲಿದೆ ಎಂದರು.