ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು: ಏನಿದರ ಲಾಭ?

ಏಕೀಕೃತ ಪಿಂಚಣಿ ಯೋಜನೆ

ಏಕೀಕೃತ ಪಿಂಚಣಿ ಯೋಜನೆ

ನವದೆಹಲಿ: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಪಕ್ಷಗಳು ಬೇಡಿಕೆ ಇಟ್ಟಿರುವ ಹಳೆಯ ಪಿಂಚಣಿ ಮತ್ತು ಹೊಸ ಪಿಂಚಣಿ ಬದಲಾಗಿ ಏಕೀಕೃತ ಪಿಂಚಣಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್​) ಅನುಮೋದನೆ ಪಡೆಯಲಾಗಿದೆ.

ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭಗಳನ್ನು ಇದು ಒದಗಿಸಲಿದೆ. ಏಕೀಕೃತ ಪಿಂಚಣಿ ಯೋಜನೆಯು 2025 ರ ಏಪ್ರಿಲ್​ 1 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೂರು ಹಂತದ ಪಿಂಚಣಿ ಖಚಿತ: ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​​ ಅವರು, ಸರ್ಕಾರ ನೌಕರರಿಗೆ ಖಚಿತ ಪಿಂಚಣಿ ಒದಗಿಸುವ ಯುಪಿಎಸ್​​ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಮೊದಲ ಕ್ರಮವೆಂದರೆ, ಶೇಕಡಾ 50 ರಷ್ಟು ಪಿಂಚಣಿ ನೀಡುವುದಾಗಿದೆ. ಅಂದರೆ, ನೌಕರನು ತಾನು 25 ವರ್ಷ ಕೆಲಸದ ಬಳಿಕ ನಿವೃತ್ತಿಯಾದಲ್ಲಿ ಆತನಿಗೆ ತನ್ನ ಕೊನೆಯ 12 ತಿಂಗಳ ಅವಧಿಯಲ್ಲಿ ಪಡೆದ ಸಂಬಳದ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತದೆ ಎಂದರು.

ಹಾಗೊಂದು ವೇಳೆ ನೌಕರ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಬರುತ್ತಿದ್ದ ಪಿಂಚಣಿಯಲ್ಲಿ ಶೇಕಡಾ 60 ರಷ್ಟು ಲಭ್ಯವಾಗಲಿದೆ. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರ ನೌಕರರಿಗೆ ನಿವೃತ್ತಿ ನಂತರ ಮಾಸಿಕ 10 ಸಾವಿರ ರೂಪಾಯಿ ಪಿಂಚಣಿ ನೀಡುವುದಾಗಿದೆ. ಅಂದರೆ, ಇದು ಖಚಿತ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಠ ಪಿಂಚಣಿಯನ್ನು ನೀಡುವುದಾಗಿದೆ ಎಂದು ವಿವರಿಸಿದರು.

ಪಿಂಚಣಿ ಆಯ್ಕೆ ಕಡ್ಡಾಯವಲ್ಲ: ಯುಪಿಎಸ್​​ ಆಯ್ಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಕಡ್ಡಾಯವಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್​) ಮತ್ತು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್​​) ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ವೈಷ್ಣವ್​ ಅವರು ತಿಳಿಸಿದರು.

Leave a Reply

Your email address will not be published. Required fields are marked *