ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್ಗಳಿಗೆ ಏಪ್ರಿಲ್ 18 ಮತ್ತು 19ರಂದು ಸಿಇಟಿ ಪರೀಕ್ಷೆಯನ್ನು ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ಪ್ರಾಧಿಕಾರದ ಜಾಲತಾಣ http://kea.kar.nic.inನಲ್ಲಿ ಫಲಿತಾಂಶ ನೋಡಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ, ಯೋಗ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸ್ಗಳಿಗೆ ರಾಜ್ಯದ 737 ಕೇಂದ್ರಗಳಲ್ಲಿ ಸಿಇಟಿ ನಡೆಸಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಸಿಇಟಿ ಪರೀಕ್ಷೆಯಲ್ಲಿ ಎಲ್ಲ ನಾಲ್ಕು ವಿಷಯಗಳಲ್ಲೂ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಪರಿಗಣಿಸದೇ ಕೈಬಿಡಲಾಗಿದೆ. ಜತೆಗೆ ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ. ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿಗೆ ಎರಡು ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ ಅತೀಹೆಚ್ಚು ಅಂಕ ಪಡೆದಿರುವುದನ್ನೇ ರ‍್ಯಾಂಕ್ ಪಟ್ಟಿಗೆ ಪರಿಗಣಿಸಲಾಗಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.
ಸದ್ಯದ ಫಲಿತಾಂಶದ ಆಧಾರದಲ್ಲಿ 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್, 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಯುಜಿ ನೀಟ್ ಪರೀಕ್ಷೆಯ ಫಲಿತಾಂಶ ಮತ್ತು ಎಂಸಿಸಿ ಕೌನ್ಸೆಲಿಂಗ್ ವೇಳಾಪಟ್ಟಿ ಗಣನೆಗೆ ತೆಗೆದುಕೊಂಡು, ಬಳಿಕ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಜಂಟಿ ಕೌನ್ಸೆಲಿಂಗ್ ನಡೆಸಲಿರುವ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆರ್ಕಿಟೆಕ್ಚರ್ ಕೋರ್ಸ್ಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ನಾಟಾ (ಎನ್ಎಟಿಎ) ಪರೀಕ್ಷೆಯಲ್ಲಿ ಅವರು ಗಳಿಸಲಿರುವ ಅಂಕಗಳನ್ನು ಪರಿಗಣಿಸಿ ರ‍್ಯಾಂಕಿಂಗ್ ಘೋಷಿಸಲಾಗುವುದು. ಬಿಪಿಟಿ, ಬಿಪಿಒ, ಬಿ.ಎಸ್ಸಿ (ಅಲೈಡ್ ಹೆಲ್ತ್ ಸೈನ್ಸಸ್) ಕೋರ್ಸುಗಳಿಗೆ ಸಂಬಂಧಿಸಿದ ಫಲಿತಾಂಶಕ್ಕೂ ಇದೇ ಸೂತ್ರವನ್ನು ಅನುಸರಿಸಲಾಗುವುದು ಎಂದು ವಿವರಿಸಿದ್ದಾರೆ.