ಬೆಂಗಳೂರಿನಲ್ಲಿ ಭಾರಿ ಮಳೆ : ರಸ್ತೆಗಳು ಜಲಾವೃತ್ತ

ಬೆಂಗಳೂರು: ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಆರಂಭವಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಇಂದು ಭಾರಿ ಮಳೆ ಸುರಿಯಲಾರಂಭಿಸಿದೆ.

ವೀಕೆಂಡ್ ಮೂಡ್ ನಲ್ಲಿದ್ದ ಬೆಂಗಳೂರಿಗರಿಗೆ ಸಂಜೆ ಸುರಿದ ಭಾರಿ ಮಳೆ ಕೊಂಚ ಕಿರಿಕಿರಿಯನ್ನುಂಟು ಮಾಡಿದ್ದು, ನಗರದ ಬಹುತೇಕ ಪ್ರದೇಶಗಳಲ್ಲಿ ಇಂದು ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಬೆಂಗಳೂರಿನ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ ಹಾಗೂ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ.

ಮಳೆ ನೀರು ನಿಂತು ರಸ್ತೆಗುಂಡಿ ಕಾಣದೇ ವಾಹನ ಸವಾರರು ಜೀವ ಪಣಕ್ಕಿಟ್ಟು ವಾಹನ ಚಲಾಯಿಸಬೇಕಿದೆ. ಮಾರತ್ ಹಳ್ಳಿ ಜಂಕ್ಷನ್ ನಲ್ಲಿ ಸವಾರರು ನೀರಿನಲ್ಲಿ ಮುಳುಗಿದ ರಸ್ತೆ ಗುಂಡಿ ದಾಟಲು ಹರಸಾಹಸವನ್ನೇ ಪಟ್ಟ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಸರ್ಜಾಪುರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶ ನದಿಯಂತಾಗಿದೆ.

ಇತ್ತ ಭಾರಿ ಮಳೆಯಿಂದಾಗಿ ಯಲಚೇನಹಳ್ಳಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ನೀರಿನ ರಭಸಕ್ಕೆ ವಾಹನಗಳೇ ಕೊಚ್ಚಿ ಹೋಗುತ್ತಿವೆ. ಸ್ಥಳೀಯ ನಿವಾಸಿಗಳು ಇಂದು ಬೀದಿಗಿಳಿದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಳೆದ 12 ವರ್ಷಗಳಿಂದ ಈ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಇದ್ದು ಕೂಡಲೇ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸುತ್ತಿದ್ದಾರೆ

Leave a Reply

Your email address will not be published. Required fields are marked *