ಚಂಢೀಗಡ: ಪಂಜಾಬ್ ರಾಜ್ಯದ ಹಣಕಾಸು ಸಚಿವ ಹರ್ಪಲ್ ಸಿಂಗ್ ಚೀಮಾ (Harpal Singh Cheema) ಬುಧವಾರ 2.36 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಇದೇ ಮೊದಲ ಬಾರಿಗೆ `ಡ್ರಗ್ಸ್ ಸೆನ್ಸಸ್’ (ಮಾದಕದ್ರವ್ಯ ಜನಗಣತಿ) ನಡೆಸಲಾಗುವುದು ಎಂದು ಘೋಷಿಸಿದರು.

ಬಜೆಟ್ ಭಾಷಣದಲ್ಲಿ ಮಾತನಾಡಿದ ಅವರು, ಎಎಪಿ (AAP) ನೇತೃತ್ವದ ಪಂಜಾಬ್ ಸರ್ಕಾರ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸಲಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಲಾಗುವುದು ಎಂದರಲ್ಲದೇ ವಾರ್ಷಿಕ ವಿಮಾ ರಕ್ಷಣೆ 10 ಲಕ್ಷ ರೂ.ಗಳಿಗೆ ದ್ವಿಗುಣ ಮತ್ತು ಸಮಗ್ರ ಅಭಿವೃದ್ಧಿಗಾಗಿ `ರಂಗ್ಲಾ ಪಂಜಾಬ್ ವಿಕಾಸ್’ ಯೋಜನೆಯನ್ನು ಪ್ರಾರಂಭಿಸುವಾಗಿ ತಿಳಿಸಿದರು.
ಆದ್ರೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವ ಗ್ಯಾರಂಟಿ ಯೋಜನೆಯನ್ನು ಕೈಬಿಟ್ಟಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಎಎಪಿ ಪಕ್ಷ ಸರ್ಕಾರಕ್ಕೆ ಬರುವ ಮೊದಲು ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವುದಾಗಿ ಚುನಾವಣಾ ಪೂರ್ವ ಭರವಸೆ ನೀಡಿದ್ದರು. ಆದ್ರೆ ಇದೀಗ ಬಜೆಟ್ ವೇಳೆ ಮಾಸಿಕ 1,000 ರೂ. ನೀಡಲು ಅನುದಾನ ಮೀಸಲಿಡದೇ ಯೋಜನೆಯನ್ನು ಮೊಟಕುಗೊಳಿಸಲಾಗಿದೆ. ಹೀಗಾಗಿ ಸಿಎಂ ಭಗವಂತ್ ಮಾನ್ ಸರ್ಕಾರದ ವಿರುದ್ಧ ಕಾಂಗ್ರೆಸ್, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಬಜೆಟ್ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಸರ್ಕಾರ ಯಾವುದೇ ಭರವಸೆಯನ್ನು ನೀಡಿಲ್ಲ. ತಾವು ನೀಡಿದ್ದ ಚುನಾವಣಾ ಪೂರ್ವ ಭರವಸೆಯನ್ನೇ ಈ ಸರ್ಕಾರ ಈಡೇರಿಸಿಲ್ಲ. ಈ ಮೂಲಕ ರಾಜ್ಯದ ಮಹಿಳೆಯರನ್ನು ನಿರಾಶೆಗೊಳಿಸಿದ್ದಾರೆ. ಇನ್ನೂ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗಾಗಿ ಯಾವುದೇ ಹೊಸ ಉಪಕ್ರಮಗಳನ್ನು ಘೋಷಿಸಿಲ್ಲ. ಜೊತೆಗೆ ರೈತರ ಕುಂದುಕೊರತೆಗಳ ಪರಿಹರಿಸುವ ಬಗ್ಗೆಯೂ ಮಾತನಾಡಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆ ಹಾಗೂ ಇತರ ಹೊಸ ಉದ್ಯೋಗ ಸೃಷ್ಟಿಗೆ ಸಂಪೂರ್ಣವಾಗಿ ಮೌನವಹಿಸಿದೆ. ರಾಜ್ಯದ ಲಕ್ಷಾಂತರ ನಿರುದ್ಯೋಗಿಗಳಿಗೆ ಈ ಬಜೆಟ್ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ. ಈ ಮೂಲಕ ಸರ್ಕಾರ ಆರ್ಥಿಕತೆಯನ್ನು ಎಷ್ಟು ಕಳಪೆಯಾಗಿ ನಿರ್ವಹಿಸುತ್ತಿದೆ ಎಂದು ಎತ್ತಿ ತೋರಿಸಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಮಾತನಾಡಿ, ಇದು ವಂಚನೆಯ ಬಜೆಟ್ ಆಗಿದ್ದು, ಅತ್ಯಂತ ನಿರಾಶಾದಾಯಕವಾಗಿದೆ. ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಮಹಿಳೆಯರು, ರೈತರು, ಸೇವಾ ವರ್ಗ, ವಿದ್ಯಾರ್ಥಿಗಳು ಮತ್ತು ವ್ಯಾಪಾರ ಸಮುದಾಯ ಸೇರಿದಂತೆ ರಾಜ್ಯದ ಎಲ್ಲಾ ವರ್ಗಗಳನ್ನು ಕಡೆಗಣಿಸಿದ್ದಾರೆ. ಎಎಪಿ ಆಡಳಿತದ ಮೂರು ವರ್ಷಗಳಲ್ಲಿ ಪಂಜಾಬ್ ದೇಶದಲ್ಲಿ ಎರಡನೇ ಅತಿ ಹೆಚ್ಚು ಸಾಲದ ರಾಜ್ಯವಾಗಿದೆ. ಮುಂಬರುವ ಹಣಕಾಸು ವರ್ಷದಲ್ಲಿ, ಎಎಪಿ ಸರ್ಕಾರವು 49,900 ಕೋಟಿ ರೂ. ಸಾಲವನ್ನು ಸಂಗ್ರಹಿಸಲಿದೆ. ಪರಿಣಾಮವಾಗಿ, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಜ್ಯದ ಬಾಕಿ ಸಾಲವು 3.96 ಲಕ್ಷ ಕೋಟಿ ರೂ.ಗಳಾಗಲಿದೆ. ಮಾರ್ಚ್
2022ರಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗ, ಪಂಜಾಬ್‌ನಲ್ಲಿ ಬಾಕಿ ಸಾಲವು 2.73 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಒತ್ತಿ ಹೇಳಿದರು.
ರಾಜ್ಯ ಬಜೆಟ್‌ಗೆ ವಿರೋಧ ಪಕ್ಷಗಳ ಟೀಕೆ ಜೋರಾಗಿದ್ದು, ಸುಳ್ಳುಗಳ ಮಹಾಪೂರವನ್ನೇ ಸುರಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಸಮಾಜದ ಎಲ್ಲಾ ವರ್ಗಗಳನ್ನು ನಿರಾಶೆಗೊಳಿಸುವ ಬಜೆಟ್ ಮಂಡಿಸಿದ್ದಾರೆ ಎಂದಿವೆ.