ಚೆನ್ನೈ: 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಿಸಿದ್ದಲ್ಲದೇ ಬಾಲಕಿ ಬರಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಅಮಾನವೀಯ ಘಟನೆ ತಮಿಳುನಾಡಿನ ಅಂಚೆಟ್ಟಿ ಗ್ರಾಮದಲ್ಲಿ ನಡೆದಿದೆ
ರಾಜ್ಯದ ಗಡಿಭಾಗವಾದ ಅಂಚೆಟ್ಟಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಬಾಲಕಿ ಅಳುತ್ತಾ ಕಿರುಚಾಡಿದರೂ ಸಹ ಬಿಡದೇ ಎಳೆದೊಯ್ದು ಮೃಗಗಳ ರೀತಿ ವರ್ತಿಸಿದ್ದಾರೆ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಸಹ ಆಕೆಯ ಪೋಷಕರು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾಲಕಿಯ ತಾಯಿಯ ಸ್ವಂತ ತಮ್ಮನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ ಅಂಚೆಟ್ಟಿಯ ಮನೆಗೆ ಬಂದಿದ್ದರು. ಅಲ್ಲಿಂದ ಆಕೆಯನ್ನು ಯುವಕನ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಬಾಲಕಿ ಬರಲು ಒಪ್ಪದಿದ್ದಾಗ ಆಕೆಯನ್ನು ಭುಜದ ಮೇಲೆ ಹಾಕಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾರೆ.
ದಾರಿಯುದ್ದಕ್ಕೂ ಬಾಲಕಿ ಕಿರುಚಾಡಿದರೂ ಕೂಡ ಪಾಪಿಗಳ ಮನಸ್ಸು ಕರಗಲಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಘಟನೆ ಸಂಬಂಧ ಡೆಂಕಣಿಕೋಟೆ ಮಹಿಳಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹವಾಗಿದ್ದ ಮಾದೇಶ್, ಆತನ ಅಣ್ಣ ಮಲ್ಲೇಶ್, ಪತ್ನಿ ಮುನಿಯಮ್ನಲ್, ಬಾಲಕಿ ತಾಯಿ ನಾಗಮ್ಮ, ಸಂಬಂಧಿ ಮುನಿಯಪ್ಪನ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.