ವಿದ್ಯಾರ್ಥಿನಿಯ ಭವಿಷ್ಯವಾಣಿ ಸಚಿವರನ್ನು ಫುಲ್ ಖುಷಿಗೊಳಿಸಿದೆ.
ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಚರ್ಚೆಯ ನಡುವೆಯೂ ಒಂದು ತಮಾಷೆಯ ಮತ್ತು ಕುತೂಹಲದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದೆಡೆ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ‘ಕೊರವಂಜಿ’ ವಿದ್ಯಾರ್ಥಿನಿಯ ಭವಿಷ್ಯವಾಣಿ ಸಚಿವರಿಗೆ ಹೊಸ ಹುರುಪು ನೀಡಿದಂತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಖಾಸಗಿ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ‘ಕೊರವಂಜಿ’ ವೇಷ ಧರಿಸಿ ವೇದಿಕೆಯ ಮೇಲಿದ್ದ ಸಚಿವ ತಿಮ್ಮಾಪುರ ಅವರನ್ನು ಕಂಡ ವಿದ್ಯಾರ್ಥಿನಿ ನಿಮಗೆ ಮುಖ್ಯಮಂತ್ರಿ ಆಗುವ ಭಾಗ್ಯ ಇದೆ ಎಂದು ತನ್ನ ಪಾತ್ರದ ಶೈಲಿಯಲ್ಲೇ ಮಾತನಾಡಿದ್ದಾಳೆ.
“ಬರ್ರಿ ಸಾಹೇಬ್ರ ಮುಂದಕ್ಕೆ ಬರ್ರಿ… ನೀವು ಮಂತ್ರಿ ಆಗ್ತೀರಿ ಅಂತ ನಮ್ಮ ಚಿಕ್ಕಮ್ಮ ಹೇಳಿದ ಖಣಿ ನಿಜ ಆಗೈತಿ.” “ಈಗ ನಾನು ಹೇಳ್ತೀನಿ ಕೇಳ್ರಿ, ಮುಂದೆ ನೀವು ರಾಜ್ಯದ ಮುಖ್ಯಮಂತ್ರಿ ಆಗುವ ಸುಯೋಗ ಐತಿ!” “ಇದನ್ನು ನಾನು ಹೇಳ್ತಿಲ್ಲ, ಗುಡ್ಡದ ಯಲ್ಲವ್ವ ನನ್ನ ಬಾಯಿಂದ ನುಡಿಸ್ತಾ ಇದ್ದಾಳೆ” ಎಂದು ಹೇಳಿ ಸಚಿವರಿಂದ ದಕ್ಷಿಣೆಯನ್ನೂ ಪಡೆದಳು. ವಿದ್ಯಾರ್ಥಿನಿಯ ಈ ಮಾತಿನಿಂದ ಸಚಿವರು ಫುಲ್ ಖುಷಿಯಾಗಿದ್ದು, ಆ ವಿಡಿಯೋವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಬಡವರ ಬಂಧು, ಶಿಕ್ಷಣ ಪ್ರೇಮಿ” ಎಂದು ವಿದ್ಯಾರ್ಥಿನಿ ಹೊಗಳಿದ್ದಕ್ಕೆ ಸಚಿವರು ನಗುನಗುತ್ತಲೇ ದಕ್ಷಿಣೆ ನೀಡಿ ಹರಸಿದ್ದಾರೆ.
For More Updates Join our WhatsApp Group :




