ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ.
ನವದೆಹಲಿ: ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿನಿಯಿಂದ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ.
‘ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ’ ಎಂದು ಪ್ರಧಾನಿ ಕಾರ್ಯಾಲಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದೆ.
‘ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಯಿಂದ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು’ ಎಂದು ಪ್ರಧಾನಿ ತಿಳಿಸಿದ್ದಾರೆ.
ಗೊರ್ಲತ್ತು ಕ್ರಾಸ್ ಬಳಿ ಮುಂಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ಗೆ ಎದುರು ಬದಿಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡ್ ಕ್ರಾಸ್ ಮಾಡಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿ ಉರಿದು 9 ಮಂದಿ ಸಜೀವ ದಹನವಾಗಿದ್ದಾರೆ.
ಲಾರಿ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ. ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ರದುರ್ಗ ಹಾಗೂ ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
For More Updates Join our WhatsApp Group :




