ಯಾವುದೇ ಸಂದರ್ಭದಲ್ಲಿ ಸಿಎಂ ರಾಜೀನಾಮೆ ಕೊಡಬೇಕಾಗುತ್ತದೆ: ಶೆಟ್ಟರ್

ಬೆಳಗಾವಿ: ಸಿದ್ದರಾಮಯ್ಯರನ್ನು ಕೆಳಗಿಳಿಸಲು ಬಿಜೆಪಿಯಿಂದ ಹುನ್ನಾರ ನಡೆಸುತ್ತಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ರಾಜೀನಾಮೆ ಕೇಳುತ್ತಿದ್ದೇವೆ. ತಪ್ಪು ಮಾಡದಿದ್ದರೆ ಹೆದರುವ ಕಾರಣವಿಲ್ಲ, ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ. ಇವತ್ತಿನ ಪರಿಸ್ಥಿತಿ ಬಹಳ ಸೂಕ್ಷ್ಮವಿದೆ, ಸಿಎಂ ಯಾವುದೇ ಸಂದರ್ಭದಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬೆಳವಣಿಗೆಗಳನ್ನು ನಾವು ಕಾದು ನೋಡುತ್ತೇವೆ. ಬಿಎಸ್ವೈ ಅವತ್ತಿನ ಪ್ರಕರಣ, ಸಿದ್ದರಾಮಯ್ಯನವರ ಪ್ರಕರಣಕ್ಕೆ ಹೋಲಿಕೆ ಸರಿಯಲ್ಲ. ನನ್ನ ಪ್ರಕಾರ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂದರು.

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೋಟಿಸ್ ವಿಚಾರಕ್ಕೆ ಮಾತನಾಡಿ, ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕೋ? ಬೇಡವೋ ಎಂಬ ಬಗ್ಗೆ ನೋಟಿಸ್ ಮೂಲಕ ಮಾಹಿತಿ ಕೇಳಿದ್ದಾರೆ. ಈ ಪ್ರಕರಣದಲ್ಲಿ ಕಾನೂನಿನ ಸೂಕ್ಷ್ಮತೆಗಳಿವೆ. ಮುಡಾ ಹಗರಣದಲ್ಲಿ ಸಿಎಂ ಭಾಗಿ ಇರುವುದು ನೇರವಾಗಿ ಕಂಡುಬರುತ್ತಿದೆ. 50 ರಷ್ಟು ಸೈಟ್ಗಳನ್ನು ಪಡೆದಿರವುದು ಕಾನೂನಿಗೆ ವಿರುದ್ಧವಾಗಿದೆ. ರಾಜ್ಯಪಾಲರು ಏನೂ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು. ಇದರಲ್ಲಿ ಹಣಕಾಸು ಇಲಾಖೆ, ಸಿಎಂ ನೇರವಾಗಿ ಭಾಗಿಯಾಗಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಪತ್ನಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆ ಸಿಬಿಐನಿಂದಲೇ ಆಗಬೇಕೆಂದು ಬಿಜೆಪಿ ಒತ್ತಾಯ ಮಾಡಿತ್ತು ಎಂದರು.

ನಾನು ವಿಧಾನಸಭೆಯಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ, ಹಲವು ಜವಾಬ್ದಾರಿ ನಿಭಾಯಿಸಿರುವೆ. ಸದನದಲ್ಲಿ ಈ ಬಗ್ಗೆ ಚರ್ಚೆಗೆ ಬಿಜೆಪಿ ಬೇಡಿಕೆ ಇಟ್ಟಿತ್ತು, ಆದರೆ ಸಿಎಂ ಅವಕಾಶ ಕೊಡಲಿಲ್ಲ. ಸದನದಲ್ಲಿ ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಎದುರಿಸಲಿಲ್ಲ. ಸ್ಪೀಕರ್ ಮೂಲಕ ನಮ್ಮ ಮನವಿ ತಿರಸ್ಕರಿಸುವ ಕೆಲಸವನ್ನು ಸಿಎಂ ಮಾಡಿದರು. ಸದನದಲ್ಲಿ ಕೊಡಬೇಕಿದ್ದ ಉತ್ತರವನ್ನು ಸಿಎಂ ಸುದ್ದಿಗೋಷ್ಠಿ ಮಾಡಿ ಹೇಳಿದರು. ಒಂದು ಪುಟ ಜಾಹೀರಾತು ನೀಡಿದ್ದು, ಸಿಎಂ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗುತ್ತದೆ. ಸಿಎಂ ರಾಜೀನಾಮೆಗೆ, ಪ್ರಕರಣ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸಿದೆ. ಸಿಎಂ ಮಾತ್ರ ಬೆಂಡ್ ಆಗದಿರುವುದಕ್ಕೆ ಬಿಜೆಪಿ ಈಗ ಪಾದಯಾತ್ರೆ ಮಾಡುತ್ತಿದೆ ಎಂದು ಶೆಟ್ಟರ್ ಹೇಳಿದರು.

ಪಾದಯಾತ್ರೆ ಬಗ್ಗೆ ಬಿಜೆಪಿಯಲ್ಲಿ ಭಿನ್ನಮತ ವಿಚಾರವಾಗಿ ಮಾತನಾಡಿ, ರಮೇಶ್ ಜಾರಕಿಹೊಳಿ, ಯತ್ನಾಳ್ ಜೊತೆಗೆ ನಮ್ಮ ವರಿಷ್ಠರು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.

Leave a Reply

Your email address will not be published. Required fields are marked *