ಚಂಡೀಗಢ: ಹರಿಯಾಣ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಮತ್ತು ಆಮ್ ಆದ್ಮಿ ಪಕ್ಷದ(AAP) ಮೈತ್ರಿ ಮಾತುಕತೆ ಮುರಿದು ಬಿದ್ದಿದ್ದು ಸೋಮವಾರ(ಸೆ 9) ರಂದು ಆಪ್ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಪಟ್ಟಿ ಬಿಡುಗಡೆ ಬಳಿಕ ಮಾತನಾಡಿದ ಹರಿಯಾಣ ಆಪ್ ಅಧ್ಯಕ್ಷ ಸುಶೀಲ್ ಗುಪ್ತಾ ” ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಸಂಘಟನೆ ಬಲಿಷ್ಠವಾಗಿದ್ದು, ನಮ್ಮ ಸಂಘಟನೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರಿಂದ ಪ್ರಾಮಾಣಿಕವಾಗಿ ಮೈತ್ರಿಗಾಗಿ ಕಾಯುತ್ತಿದ್ದೆವು.
ನಾವು ತಾಳ್ಮೆಯನ್ನು ತೋರಿಸಿದೆವು. ನಂತರ ನಾವು ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ನಾವು INDIA Alliance ನ ಪಾಲುದಾರರಾಗಿದ್ದೇವೆ” ಎಂದರು.
” ಇಂದು ಸಂಜೆಯ ಹೊತ್ತಿಗೆ, ನೀವು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ನಾಮಪತ್ರ ಸಲ್ಲಿಕೆಗೆ ಇನ್ನು 3 ದಿನ ಮಾತ್ರ ಬಾಕಿಯಿದ್ದು, 3 ದಿನದೊಳಗೆ ಎಲ್ಲ ಅಭ್ಯರ್ಥಿಗಳು ಅಣಿಯಾಗಬೇಕಾಗಿದ್ದು, ಇದಕ್ಕಾಗಿ ಪರಿಶೀಲನೆ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷ ಉತ್ತಮ ಮತ್ತು ಪ್ರಬಲ ಆಯ್ಕೆಯಾಗಿದೆ. ಆರೋಪ, ಪ್ರತ್ಯಾರೋಪಗಳ ರಾಜಕಾರಣಕ್ಕೆ ಬರಲು ನಾನು ಬಯಸುವುದಿಲ್ಲ. ನಾವು ಹರಿಯಾಣದ ವ್ಯವಸ್ಥೆಯನ್ನು ಬದಲಾಯಿಸಲು ಹೋರಾಡುತ್ತಿದ್ದೇವೆ” ಎಂದು ಸುಶೀಲ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ರಾಜ್ಯದ 10 ಲೋಕಸಭಾ ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಸ್ಪರ್ಧಿಸಿತ್ತು, ಕುರುಕ್ಷೇತ್ರವನ್ನು ಎಎಪಿಗೆ ಬಿಟ್ಟುಕೊಟ್ಟಿತ್ತು. 5 ರಲ್ಲಿ ಬಿಜೆಪಿ ಗೆದ್ದಿದ್ದರೆ, 5 ರಲ್ಲಿ ಕಾಂಗ್ರೆಸ್ ಗೆದ್ದು ಬಲ ಪ್ರದರ್ಶನ ಮಾಡಿತ್ತು. 90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 42ರಲ್ಲಿ ಮೇಲುಗೈ ಸಾಧಿಸಿತ್ತು. ಎಎಪಿ ನಾಲ್ಕರಲ್ಲಿ ಮುನ್ನಡೆ ಸಾಧಿಸಿತ್ತು ಆದರೆ ಕ್ಷೇತ್ರ ಗೆಲ್ಲಲು ವಿಫಲವಾಗಿತ್ತು. ಈಗ ಮೈತ್ರಿ ಮಾತುಕತೆಗಳು ಮುರಿದು ಬಿದ್ದಿದೆ. ಹರಿಯಾಣ ವಿಧಾನಸಭೆಯ ಎಲ್ಲಾ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಅಕ್ಟೋಬರ್ 8 ರಂದು ಘೋಷಣೆಯಾಗಲಿದೆ.