ಸೀಟಿಗಾಗಿ ಮಹಿಳೆಯರ ಫೈಟ್ : ಬಸ್ಸನ್ನೆ ಠಾಣೆಗೆ ತಂದು ನಿಲ್ಲಿಸಿದ ಚಾಲಕ

ಶಿವಮೊಗ್ಗ: ಸೀಟಿಗಾಗಿ ಮಹಿಳೆಯರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ಸಾಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಾಜ್ಯ ಸರಕಾರದ ಶಕ್ತಿ ಯೋಜನೆ ಆರಂಭವಾದಾಗಿನಿಂದ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರಕಾರಿ ಬಸ್ಸನ್ನು ಅವಲಂಭಿಸುತ್ತಿದ್ದಾರೆ.

ಈ ನಡುವೆ ಸೀಟಿಗಾಗಿ ಬಸ್ಸಿನಲ್ಲಿ ಮಹಿಳೆಯರ ಹೊಡೆದಾಟ ಪ್ರಕರಣಗಳು ಹೆಚ್ಚಾಗುತ್ತಿದೆ.

ಅದೇ ರೀತಿ ಸಾಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸಿನಲ್ಲಿ ಇಬ್ಬರು ಮಹಿಳೆಯರು ಸೀಟಿಗಾಗಿ ಜಗಳ ಮಾಡಿಕೊಂಡಿದ್ದಾರೆ, ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ ಈ ನಡುವೆ ಬಸ್ಸಿನ ಚಾಲಕ, ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಜಗಳ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಕೊನೆಗೆ ಬಸ್ ಚಾಲಕ ಮಹಿಳೆಯರ ಗಲಾಟೆ ನಿಯಂತ್ರಿಸಲಾಗದೆ ಬಸ್ಸನ್ನು ಸಾಗರ ಪಟ್ಟಣ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ.

ಗಲಾಟೆ ನಡೆಸಿದ ಮಹಿಳೆಯರನ್ನು ಬಸ್ಸಿನಿಂದ ಇಳಿಸಿ ಬಸ್ಸು ಶಿವಮೊಗ್ಗ ಕಡೆಗೆ ಪ್ರಯಾಣ ಬೆಳೆಸಿದೆ, ಇನ್ನು ಇಬ್ಬರು ಮಹಿಳೆಯರಿಗೆ ಪೊಲೀಸರು ಬುದ್ದಿವಾದ ಹೇಳಿ ಬಳಿಕ ಕಳುಹಿಸಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *