ಮೈಸೂರು ಅರಮನೆ ಮುಂಭಾಗದಲ್ಲಿ ಟಾಂಗಾ ಸ್ಟ್ಯಾಂಡ್ ವಿವಾದ

ಮೈಸೂರು ಅರಮನೆ ಮುಂಭಾಗದಲ್ಲಿ ಟಾಂಗಾ ಸ್ಟ್ಯಾಂಡ್ ವಿವಾದ

‘ಸ್ವದೇಶ್ ದರ್ಶನ 2.0’ ಯೋಜನೆಗೆ ಹೊಸ ತಕರಾರು

ಮೈಸೂರು: ಮೈಸೂರು ಅಂದರೆ ಅದು ಪಾರಂಪರಿಕ ಕಟ್ಟಡಗಳ ತವರು. ಇಲ್ಲಿನ ಪ್ರತಿ ರಸ್ತೆಯಿಗೂ ಒಂದು ಇತಿಹಾಸವಿದೆ. ಆದರೆ ಈಗ ಅದೇ ಇತಿಹಾಸಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ‘ಸ್ವದೇಶ್ ದರ್ಶನ 2.0’ ಯೋಜನೆಯಡಿ ನಗರದ 10 ಕಡೆ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಆದರೆ ಈ ಯೋಜನೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಮಾರ್ಗವನ್ನು ಒಡೆದು, ಫುಟ್‌ಪಾತ್ ಮೇಲೆಯೇ ಟಾಂಗಾ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದೆ.

‘ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ಟಾಂಗಾ ಸವಾರಿಗೆ ಉತ್ತೇಜನ ನೀಡುವ ಹೆಸರಿನಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ. ದಿನನಿತ್ಯ ಸಾವಿರಾರು ಪ್ರವಾಸಿಗರು ಮತ್ತು ಜನಸಾಮಾನ್ಯರು ಸಂಚರಿಸುವ ಈ ಪ್ರದೇಶದಲ್ಲಿ ಸ್ಟ್ಯಾಂಡ್ ನಿರ್ಮಿಸಿದರೆ ಪಾದಚಾರಿಗಳು ರಸ್ತೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪಾಲಿಕೆಯೇ ಫುಟ್‌ಪಾತ್ ಒತ್ತುವರಿ ಮಾಡುತ್ತಿದೆ ಎಂದು ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *