ಉಡುಪಿ: ಇಂದು ದೇಶದೆಲ್ಲೆಡೆ ಅಷ್ಟಮಿ ಸಂಭ್ರಮ. ಆದರೆ ಕಡಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಾಣಬೇಕಾದರೆ ಭಕ್ತರು ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಜನ್ಮಾಷ್ಟಮಿ ದೇಶದಲ್ಲೇ ಪ್ರಸಿದ್ಧ. ಆದರೆ ಈ ಬಾರಿ ಉಡುಪಿಯಲ್ಲಿ ಪ್ರತ್ಯೇಕವಾಗಿ ಅಷ್ಟಮಿ ಆಚರಣೆ ನಡೆಯಲಿದೆ. ಆ ಮೂಲಕ ಇದೊಂದು ಅಪರೂಪದ ಸಂಪ್ರದಾಯವಾಗಿದೆ.
ನಾಡಿನಲ್ಲೆಡೆ ಚಾಂದ್ರಮಾನ ಪದ್ಧತಿಯಂತೆ ಅಷ್ಟಮಿ ಹಬ್ಬವನ್ನು ಆಚರಿಸಿದರೆ, ಉಡುಪಿಯಲ್ಲಿ ಸೌರಮಾನ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಹುಣ್ಣಿಮೆ- ಅಮಾವಾಸ್ಯೆಯ ಗಣನೆಯಲ್ಲಿ ಇತರ ಭಾಗದಲ್ಲಿ ಆಚರಣೆ ನಡೆದರೆ, ತುಳುನಾಡ ಕರಾವಳಿಯಲ್ಲಿ ಸಂಕ್ರಮಣ ವಿಶೇಷ. ಹಾಗಾಗಿ ಈ ಬಾರಿ ಅಷ್ಟಮಿ ತಿಥಿಯ ಜೊತೆ ರೋಹಿಣಿ ನಕ್ಷತ್ರ ಸನ್ನಿಹಿತವಾಗಿರುವ, ಸೆಪ್ಟೆಂಬರ್ 14ರಂದು ಅಷ್ಟಮಿ ಆಚರಿಸಲಾಗುತ್ತಿದೆ. ಇದನ್ನು ಶ್ರೀಕೃಷ್ಣ ಜಯಂತಿ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಕೃಷ್ಣ ಊರಿನಲ್ಲಿ ಇಂದು ಅಷ್ಟಮಿಯ ಸಂಭ್ರಮವಿಲ್ಲ.
ಇಂದು ಚಂದ್ರಮಾನ ಪದ್ಧತಿಯಂತೆ ಹಬ್ಬ ಆಚರಿಸುವವರಿಗೂ ಕೃಷ್ಣ ಮಠ ಅವಕಾಶ ಕಲ್ಪಿಸಿದೆ. ಸಾಂಕೇತಿಕವಾಗಿ ಇಂದು ಕೂಡ ಅರ್ಗ್ಯ ಪ್ರಧಾನ ಅವಕಾಶ ಇದೆ. ಆದರೆ ಅಷ್ಟಮಿ ವೈಭವ ಮಾತ್ರ ಇಲ್ಲ. ಬಂದ ಭಕ್ತರು ಶ್ರೀ ಕೃಷ್ಣ ದರ್ಶನ ಮಾಡಿದರು. ಆದರೆ ರಥಬೀದಿ ತುಂಬ ಕಾಣುವ ಬಾಲಕೃಷ್ಣ, ಮೊಸರು ಕುಡಿಕೆ ಸಂಭ್ರಮ, ಕೃಷ್ಣ ಉತ್ಸವ ಎಲ್ಲವೂ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತೆ.
ಹೂವಿನ ವ್ಯಾಪರಿಗಳಿಗೆ ನಿರಾಸೆ
ಉಡುಪಿ ಅಷ್ಟಮಿ ಅಂದರೆ ಹಬ್ಬದ ಸಂಭ್ರಮ ಇರುತ್ತೆ. ವ್ಯಾಪಾರ ಬಹಳ ಜೋರಾಗಿಯೇ ನಡೆಯುತ್ತೆ ಎಂದು ಬಂದ ಹಾಸನ, ಚಿಕ್ಕಮಗಳೂರು ಕಡೆಯ ನೂರಾರು ಹೂವಿನ ವ್ಯಾಪರಿಗಳು ನಿರಾಸೆಯಾಗಿದ್ದಾರೆ. ಅಷ್ಟಮಿ ಹಬ್ಬದ ಆಚರಣೆ ಇಲ್ಲದ ಕಾರಣಕ್ಕೆ ಹೂವಿನ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಅಷ್ಟಮಿ ಸಂಭ್ರಮದಲ್ಲಿ ನಾಲ್ಕು ಕಾಸು ದುಡಿಮೆ ಆಗುತ್ತೆ ಬಂದವರು ಕೈ ಸುಟ್ಟುಕೊಂಡು ಹೋಗುವಂತಾಗಿದೆ.
ಉಡುಪಿ ನಿತ್ಯೋತ್ಸವದ ನಾಡು. ಅಷ್ಟಮಿ ಆಚರಣೆ ಇಲ್ಲಿಯೂ ಇಂದೇ ನಡೆಯುತ್ತದೆ ಎಂದು ಬಂದ ಭಕ್ತರಿಗೂ, ಕರ್ಮ ಫಲದ ಮೇಲೆ ನಂಬಿಕೆ ಇಟ್ಟು ಬಂದ ಹೂವಿನ ವ್ಯಾಪರಿಗಳಿಗೂ ನಿರಾಸೆಯಾಗಿದೆ. ಇವತ್ತು ನಷ್ಟ ಆದರೂ ಮುಂದಿನ ತಿಂಗಳ ಹಬ್ಬಕ್ಕೆ ಕೈ ತುಂಬ ದುಡಿಮೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
For More Updates Join our WhatsApp Group :