ತಮಿಳುನಾಡು: ಫೆಬ್ರವರಿ 2024 ರಲ್ಲಿ “ತಮಿಳಿಗ ವೆಟ್ರಿ ಕಳಗಂ” ಎಂಬ ಹೆಸರಿನಲ್ಲಿ ಪಕ್ಷವನ್ನು ಘೋಷಿಸಿದ ನಟ ವಿಜಯ್ ಪೂರ್ಣಾವಧಿಯ ರಾಜಕಾರಣಿಯಾಗಿ ವೇದಿಕೆ ಏರಿದ್ದಾರೆ. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿ ವಿ.ಸಲೈ ಗ್ರಾಮದಲ್ಲಿ ನಡೆದ ಪಕ್ಷದ ಮೊದಲ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ವಿಜಯ್, ಈ ಸಮಾವೇಶವನ್ನು ಪಕ್ಷದ “ವಿಜಯ ನೀತಿ ಉತ್ಸವ” ಎಂದು ಹೆಸರಿಸಿದ್ದಾರೆ. ತಮ್ಮ ಭಾಷಣದಲ್ಲಿ, ಪಕ್ಷದ ಸಿದ್ಧಾಂತ ಹಾಗೂ ನೀತಿಗಳನ್ನು ವಿವರಿಸಿದ ವಿಜಯ್, ಯಾರ ವಿರುದ್ಧ ತಮ್ಮ ರಾಜಕೀಯ ಎನ್ನುವುದನ್ನು ಹೇಳಿದ್ದಾರೆ.
ತಮ್ಮ ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ನಟ ವಿಜಯ್ ಅವರು ವೈಚಾರಿಕತೆ ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ಮೌಲ್ಯಗಳಿಗೆ ಒತ್ತು ನೀಡಿದರು. ಅವರು ತಮ್ಮ ಪಕ್ಷದ ತತ್ವಗಳಿಗೆ ಪೆರಿಯಾರ್ ಅವರನ್ನು ಪ್ರಮುಖ ವ್ಯಕ್ತಿ ಎಂದು ಬಣ್ಣಿಸಿದರು. ಆದರೆ ತಮ್ಮ ಪಕ್ಷ ಪೆರಿಯಾರ್ ಅವರ ನಾಸ್ತಿಕತೆಯನ್ನು ಒಪ್ಪುವುದಿಲ್ಲ. ಪ್ರತಿಯೊಬ್ಬರ ದೇವರ ಮೇಲಿರುವ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ “ಒಂದೇ ಕುಲ ಮತ್ತು ಒಬ್ಬನೇ ದೇವರು” (ಒಂಡ್ರೆ ಕುಲಂ ಒರುವಾನೆ ದೇವನ್) ಎಂಬ ಮಾತನ್ನು ಉಲ್ಲೇಖಿಸಿದರು.
ಕಾಮರಾಜ್ ಅವರ ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯನ್ನು ಶ್ಲಾಘಿಸಿದ ಅವರು, ಜಾತಿ ದಬ್ಬಾಳಿಕೆಯ ವಿರುದ್ಧ ಅಂಬೇಡ್ಕರ್ ಅವರ ಕಾರ್ಯವನ್ನು ಎತ್ತಿ ತೋರಿಸಿದರು. ವೇಲುನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಸ್ಫೂರ್ತಿಯಾಗಿ ಉಲ್ಲೇಖಿಸಿದ ದಳಪತಿ, ತಮ್ಮ ಪಕ್ಷ ಟಿವಿಕೆ ಮಹಿಳೆಯರ ನಾಯಕತ್ವವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.
ಭ್ರಷ್ಟಾಚಾರ ಮತ್ತು ಒಡೆದು ಆಳುವ ರಾಜಕೀಯದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ‘ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವೇ ಎಂದು ನನಗೆ ಇನ್ನೂ ತಿಳಿದಿಲ್ಲ. ಸಮಾಜವನ್ನು ನೋಯಿಸುವ ಪ್ರಬಲ ಶಕ್ತಿ ಅದು. ಭ್ರಷ್ಟ ಆಚರಣೆಗಳು ಮತ್ತು ಕೋಮುವಾದಿ ಶಕ್ತಿಗಳು ನಮ್ಮ ಪಕ್ಷದ ಪ್ರಮುಖ ಶತ್ರುಗಳು” ಎಂದರು.
“ನಮ್ಮ ಪಕ್ಷ ಪ್ರಾಮಾಣಿಕವಾಗಿರುತ್ತದೆ ಮತ್ತು ಯಾವತ್ತೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ” ಎಂದು ಭರವಸೆ ನೀಡಿದರು.