ಕಲಬುರಗಿ: ಇದೇ ನವೆಂಬರ್ 2ರಂದು ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ ನಿರಾಸೆಯಾಗಿದೆ. ಆರ್ಎಸ್ಎಸ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು (ಅಕ್ಟೋಬರ್ 24) ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಸರ್ಕಾರಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಯಾವುದೇ ಆದೇಶ ನೀಡಿದೆ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಅಕ್ಟೋಬರ್ 30ರಂದು ವರದಿ ನೀಡುವಂತೆ ಕೋರ್ಟ್ ತಿಳಿಸಿದ್ದು, ಈ ವರದಿ ಆಧಾರದ ಮೇಲೆ ಕೋರ್ಟ್ ತೀರ್ಪು ನೀಡಲಿದೆ. ಇನ್ನು ನವೆಂಬರ್ 2ರಂದು ಪಥಸಂಚಲನಕ್ಕೆ ಕೋರ್ಟ್ ಇಂದು ಅನುಮತಿ ನೀಡುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಆರ್ಎಸ್ಸ್ ಮುಖಂಡರಿಗೆ ಕೊಂಚ ನಿರಾಸೆಯಾಗಿದೆ.
ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ವಾದ
ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ 2 ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್‌ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಸರ್ಕಾರದ ಪರ ವಕೀಲ ಎಜಿ (ಅಡ್ವೊಕೇಟ್ ಜನರಲ್ ಶಶಿಕಿರಣ್ ) ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಎಜಿ ಶಶಿಕಿರಣ್ ಶೆಟ್ಟಿ: ನಾವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿಲ್ಲ, ಬಾಕಿಯಿರಿಸಿದ್ದೇವೆ.
ಹೈಕೋರ್ಟ್: ಹಾಗಿದ್ದರೆ ಯಾವಾಗ ತೀರ್ಮಾನ ಕೈಗೊಳ್ಳುತ್ತೀರಿ?
ಎಜಿ ಶಶಿಕಿರಣ್ ಶೆಟ್ಟಿ: ಶಾಂತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎರಡು ವಾರಗಳ ಬಳಿಕ ವಿಚಾರಣೆ ನಡೆಸುವಂತೆ ಎಜಿ ಮನವಿ.
ಹೈಕೋರ್ಟ್: ನಿಮ್ಮ ಆಡಳಿತ ಸಾಮರ್ಥ್ಯ ಸಾಬೀತಿಗೆ ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವಂತೆ ಸಮಸ್ಯೆ ಬಗೆಹರಿಸಿ ಎಂದ ಹೈಕೋರ್ಟ್
ಹೈಕೋರ್ಟ್: ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ವರದಿಯಲ್ಲಿ ಸ್ಪಷ್ಟತೆಯಿಲ್ಲ
For More Updates Join our WhatsApp Group :
