ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿ ಸದ್ದು ಮಾಡುತ್ತಿದೆ. ಬಿಜೆಪಿ ಶಾಸಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಶಾಸಕರು ಒಟ್ಟಾಗಿ ಸಭೆ ನಡೆಸಿದ್ದು, ಬಿ ಎಸ್ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಗುಡುಗಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಮುಡಾ ಹಗರಣದ ಕುರಿತು ಬೃಹತ್ ಪಾದಯಾತ್ರೆಯನ್ನ ನಡೆಸಿದ್ರೆ, ಇತ್ತ ಕಮಲ ಕೋಟೆಯಲ್ಲಿಯೇ ಇನ್ನೊಂದು ಬಣ ಮತ್ತೊಂದು ಪಾದಯಾತ್ರೆಗೆ ರೆಡಿಯಾಗಿತ್ತು. ಈ ಎಲ್ಲಾ ಬೆಳವಣೆಗೆಯಿಂದಾಗಿ ಬಿಜೆಪಿ ಪಾಳಯದಲ್ಲಿ ಬಿರುಕು ಮೂಡಿದಿಯಾ ಎಂಬ ಅನುಮಾನುಗಳು ಹುಟ್ಟಿಕೊಂಡಿತ್ತು. ಈ ಎಲ್ಲಾ ಬೆಳವಣೆಗೆಗಳ ನಡುವೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ಪಕ್ಷದ ವರಿಷ್ಠರು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದೆಹಲಿಯಲ್ಲಿ ದೂರು ಕೊಡಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅವರ ಕುರಿತು ಇಲ್ಲಿ ನಾನು ಪ್ರಸ್ತಾಪಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಉತ್ತರಿಸಿದ್ದಾರೆ.
ಪಕ್ಷದ ಬೆಳವಣಿಗೆಗೆ ಪೂರಕ ಇದ್ದರೆ, ರಾಷ್ಟ್ರೀಯ ನಾಯಕರ ಒಪ್ಪಿಗೆ ಇದ್ದರೆ ಇನ್ನೊಂದು ಪಾದಯಾತ್ರೆ ಮಾಡಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಬಲ ತುಂಬಲಿದ್ದೇನೆ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು. ಇನ್ನೂ ರಾಜ್ಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ದೇಶದ ಎಲ್ಲಾ ರಾಜ್ಯಗಳಿಗೂ ವಿಶೇಷ ಅನುದಾನ ಬಂದ್ ಮಾಡಿದೆ. ಜನರಿಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಲೋಪದೋಷ ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ರಾಷ್ಟ್ರೀಯ ಅಧ್ಯಕ್ಷರ ಜೊತೆಗೆ ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದೆ. ಜೆ.ಪಿ.ನಡ್ಡಾ ನನ್ನ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ದಾಖಲೆ ಬರೆಯಲಿದ್ದೇವೆ ಎಂದು ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಚರ್ಚೆಯಾಗಿದೆ, ನಮ್ಮ ವರಿಷ್ಠರು ತಿರ್ಮಾನ ಮಾಡುತ್ತಾರೆ. ನಾಡಿದ್ದು ಅಮಿತ್ ಶಾ ಮೈಸೂರಿಗೆ ಬಂದಾಗ ಚರ್ಚೆಯಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ವೇಳೆ ಶಾಸಕ ಯತ್ನಾಳ್ ಭೇಟಿಯಾಗಿದೆ. ಇದಕ್ಕೆ ವಿಶೇಷ ಒತ್ತು ಕೊಡುವ ಅಗತ್ಯ ಇಲ್ಲ ಎಂದರು.
ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಸಚಿವರಿಗೆ ವಿಶ್ವಾಸ ಇಲ್ಲ. ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ತಾಯಿಯಲ್ಲಿ ಆಶೀರ್ವಾದ ಬೇಡಿಕೊಂಡು ಬಂದಂತಿದೆ; ಅದು ಬೇರೆ ವಿಚಾರ ಎಂದು ನಗುತ್ತ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಪಾಪ ಕಾಂಗ್ರೆಸ್ಸಿಗರು ಗಾಬರಿಯಿಂದ ನಮ್ಮ ಪಾದಯಾತ್ರೆ ತಲುಪುವ ಮುನ್ನ ಜನಾಂದೋಲನ ಮಾಡಿದ್ದರು. ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯನವರು ಮೈಸೂರಿನಲ್ಲಿದ್ದು, ಜನಾಂದೋಲನಕ್ಕೆ ಸಿದ್ಧತೆ ಮಾಡಿದ್ದರು.
ಇವತ್ತಲ್ಲ ನಾಳೆ ಸಿಎಂ ರಾಜೀನಾಮೆ ಕೊಡಲೇಬೇಕು. ಹೈಕೋರ್ಟಿನ ತೀರ್ಪು ಬಂದ ಬಳಿಕವಾದರೂ ಅವರು ರಾಜೀನಾಮೆ ನೀಡಲಿದ್ದಾರೆ. ಇವತ್ತಲ್ಲ ನಾಳೆ ಆ 14 ನಿವೇಶನಗಳು ಮುಡಾ ಪಾಲಾಗಿ ಬಡವರಿಗೆ ಸಿಗಲಿದೆ ಎಂದು ತಿಳಿಸಿದರು. ಈ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕೆಲಸಗಳು ಶುರುವೇ ಆಗಿಲ್ಲ. ಯಾವುದೇ ಹೊಸ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡುತ್ತಿಲ್ಲ ಎಂದು ಟೀಕಿಸಿದರು.
ಸರಕಾರದ ಗ್ಯಾರಂಟಿ ಪರಿಣಾಮವಾಗಿ ಕೆಎಸ್ಆರ್ಟಿಸಿಗೆ 4,500 ಕೋಟಿ ರೂ. ಕೊಡಬೇಕಿದೆ. ಇನ್ನೂ ಮೂರ್ನಾಲ್ಕು ತಿಂಗಳು ಹೀಗೇ ಮುಂದುವರೆದರೆ ಕೆಎಸ್ಆರ್ಟಿಸಿ ಬಾಗಿಲು ಮುಚ್ಚಲಿದೆ. ಸಂಬಳ ಕೊಡಲೂ ದುಡ್ಡಿಲ್ಲ. ಮತ್ತೊಂದು ಕಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ತಿಳಿಸಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಗ್ಗಿ ಹೋಗಿದ್ದು, 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿಗಳಿದ್ದರೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಇರಲಿ; ಅವರ ಗೌರವಧನವನ್ನು 3 ತಿಂಗಳಿಂದ ಪಾವತಿಸಿಲ್ಲ ಎಂದು ಆಕ್ಷೇಪಿಸಿದರು. ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು- ಸುವ್ಯವಸ್ಥೆ ಹಾಳಾಗಿದೆ ಎಂದರು.