ಲಖನೌ: ಬುಲಂದ್ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದ ನಂತರ ಮನೆ ಕುಸಿದು ಬಿದ್ದಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬುಲಂದ್ಶಹರ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಮಾತನಾಡಿ, ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಶಟರ್ ಕೆಲಸದಲ್ಲಿ ತೊಡಗಿದ್ದ ರಿಯಾಜುದ್ದೀನ್ ಎಂಬಾತನ ಮನೆಯಲ್ಲಿ ಸುಮಾರು 19 ಜನರು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
“ಸಿಕಂದರಾಬಾದ್ನ ಆಶಾಪುರಿ ಕಾಲೋನಿಯಲ್ಲಿ ರಾತ್ರಿ 8.30 ರಿಂದ 9.00 ರ ನಡುವೆ ಸಿಲಿಂಡರ್ ಸ್ಫೋಟ ಸಂಭವಿಸಿ ಇಡೀ ಮನೆ ಕುಸಿದು ಬಿದ್ದಿದೆ. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟ ಸಂಭವಿಸಿದ್ದು ಹೇಗೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ತನಿಖೆಯ ನಂತರ ಸ್ಪಷ್ಟಪಡಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್, ವೈದ್ಯಕೀಯ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
“ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಘಟನೆಯ ಬಗ್ಗೆ ತಕ್ಷಣ ಗಮನಹರಿಸಿದ್ದಾರೆ. ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ” ಎಂದು ಡಿಸಿ ಮಾಹಿತಿ ಒದಗಿಸಿದರು.