ಗೌರ್ನರ್ ತಪ್ಪು ನಡೆ ಪ್ರಶ್ನಿಸಿದಕ್ಕೆ ದಲಿತ ಗುರಾಣಿ ಅಸ್ತ್ರ : ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಘನತೆವೆತ್ತ ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹ್ಲೋತ್ ಅವರ ತಪ್ಪು ನಡೆಯ ಬಗೆಗಿನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ರಾಜ್ಯದ ಬಿಜೆಪಿ ನಾಯಕರು “ದಲಿತ ಗುರಾಣಿ” ಬಳಸುತ್ತಿರುವುದು ಸಮಸ್ತ ಸ್ವಾಭಿಮಾನಿ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಮುಖ್ಯ ಮಂತ್ರಿ ಗಳು ‘ಹಿಂದುಗಳಲ್ಲಿ ಜಾತಿಯೇ ಇಲ್ಲ, ಧರ್ಮವೇ ಎಲ್ಲ’ ಎಂದು ಉಪದೇಶ ಮಾಡುತ್ತಿರುವ ಬಿಜೆಪಿ ನಾಯಕರ ಬುಡಕ್ಕೆ ನೀರು ಬಂದಾಗ ಜಾತಿ ನೆನಪಾಗುತ್ತದೆ ಎಂದು ಕುಟುಕಿದ್ದಾರೆ.

ರಾಜ್ಯಪಾಲರಿಗೆ ಅವಮಾನವಾಗಿದೆ ಎಂದು ಪ್ರತಿಭಟಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ನನ್ನ ಕೆಲವು ಸರಳ ಪ್ರಶ್ನೆಗಳಿವೆ.
ಮೊದಲನೆಯದಾಗಿ, ದಲಿತ ಸಮುದಾಯಕ್ಕೆ ಸೇರಿರುವ ಥಾವರಚಂದ್ ಗೆಹ್ಲೋತ್ ಅವರ ಬಗ್ಗೆ ನಿಮ್ಮಲ್ಲಿ ಅಷ್ಟೊಂದು ಗೌರವ ಮತ್ತು ಅಭಿಮಾನವಿದ್ದರೆ ಕೇಂದ್ರ ಸಚಿವ ಸಂಪುಟದಲ್ಲಿರಬೇಕಾಗಿದ್ದ ಅವರನ್ನು ಇಲ್ಲಿ ತಂದು ‘‘ಪಂಜರದ ಗಿಣಿ’’ ಯನ್ನಾಗಿ ಯಾಕೆ ಮಾಡಿದ್ದೀರಿ? ‘‘ಮಾರ್ಗದರ್ಶಕ ಮಂಡಳಿ ಎಂಬ ವನವಾಸಾಶ್ರಮ’’ ಸೇರುವಷ್ಟು ವಯಸ್ಸಾಗದೆ ಇದ್ದರೂ ಅವರ ಸಕ್ರಿಯ ರಾಜಕೀಯ ಜೀವನವನ್ನು ಯಾಕೆ ಮೊಟಕುಗೊಳಿಸಿದಿರಿ?

ಕೇಂದ್ರ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ದದ ದ್ವೇಷದ ರಾಜಕಾರಣಕ್ಕೆ ದಲಿತ ಸಮುದಾಯದ ನಾಯಕನನ್ನು ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅನ್ಯಾಯ-ಅವಮಾನ ಅಲ್ಲವೇ? ಬಿಜೆಪಿ ನಾಯಕರೇ, ದಲಿತ ನಾಯಕರೊಬ್ಬರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ?! ಎಂದು ಪ್ರಶ್ನಿಸಿ ದ್ದಾರೆ.

ದಲಿತರನ್ನು ಬಳಸಿ ಬಿಸಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಪಿತೂರಿ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಷ್ಟು ದಲಿತ ಸಮುದಾಯ ಜಾಗೃತವಾಗಿದೆ. ಈಗ ನೀವು ದಲಿತರ ಹೆಸರಲ್ಲಿ ಸುರಿಸುತ್ತಿರುವ ಮೊಸಳೆ ಕಣ್ಣೀರಿನ ಹಿಂದಿನ ಪ್ರಾಮಾಣಿಕತೆ ತಿಳಿಯದಷ್ಟು ದಡ್ಡರಲ್ಲ. ಕನಿಷ್ಠ ಅಟಲ್ ಬಿಹಾರಿ ವಾಜಪೇಯಿ ಅವರು ದಲಿತ ಸಮುದಾಯಕ್ಕೆ ಸೇರಿರುವ ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆದರೆ ಬಿಜೆಪಿಯೊಳಗಿನ ‘‘ಸಂಘಿ ಮನಸ್ಸು’’ ಅದನ್ನು ಸಹಿಸಿಕೊಳ್ಳದೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿತು, ಕೊನೆಗೆ ಅದೇ ಕೊರಗಿನಲ್ಲಿ ಅವರು ಸಾವಿಗೀಡಾದರು.

ದಲಿತ ಸಮುದಾಯದಕ್ಕೆ ಸೇರಿರುವ ನಮ್ಮ ಪಕ್ಷದ ಈಗಿನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಹಿರಿಯ ನಾಯಕರು ಎಷ್ಟು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿ ಕಲಿಯಿರಿ ಎಂದು ತಿರುಗೇಟು ನೀಡಿದ್ದಾರೆ.

ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ, ಮೀಸಲಾತಿಯನ್ನು ವಿರೋಧಿಸುತ್ತಿರುವ ಮತ್ತು ಜಾತಿ ತಾರತಮ್ಯವನ್ನು ಅಂತರಂಗದಲ್ಲಿ ಒಪ್ಪಿಕೊಂಡು ಬಹಿರಂಗದಲ್ಲಿ ಜಾತ್ಯತೀತತೆಯ ಸೋಗುಹಾಕಿರುವ ನಿಮಗೆ ದಲಿತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ನಿಮಗೆ ದಲಿತ ಸಮುದಾಯದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಥಾವರಚಂದ್ ಗೆಹ್ಲೋತ್ ಅವರ ಮೇಲೆ ಕೆಟ್ಟ ಕೆಲಸ ಮಾಡಲು ರಾಜಕೀಯ ಒತ್ತಡ ಹೇರಲು ಹೋಗದೆ, ಅವರು ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಿ, ಈ ಪ್ರತಿಭಟನೆ, ಪ್ರತಿರೋಧದ ನಾಟಕಗಳನ್ನು ನಿಲ್ಲಿಸಿ ಎಂದು ಸಿಎಂ ಆಗ್ರಹಿಸಿ ದ್ದಾರೆ.

Leave a Reply

Your email address will not be published. Required fields are marked *